ಅಮೆರಿಕ ಖಜಾನೆಯ ನಗದು ಕನಿಷ್ಟ ಮಟ್ಟಕ್ಕೆ ಇಳಿಕೆ: ಮೇ ಅಂತ್ಯಕ್ಕೆ ಬರಿದಾಗುವ ಸಾಧ್ಯತೆ

Update: 2023-05-27 16:33 GMT

ವಾಷಿಂಗ್ಟನ್, ಮೇ 27: ಅಮೆರಿಕದ ಖಜಾನೆಯಲ್ಲಿನ ನಗದು ಪ್ರಮಾಣವು ಗುರುವಾರ 38.8 ಶತಕೋಟಿ ಡಾಲರ್ ಗೆ ಇಳಿದಿದ್ದು ಇದು 2017ರ ಬಳಿಕದ ಅತ್ಯಂತ ಕನಿಷ್ಟ ಮೊತ್ತವಾಗಿದೆ. ಸಾಲದ ಮಿತಿ ಹೆಚ್ಚಳದ ಬಗ್ಗೆ ನಡೆಯುತ್ತಿರುವ ಚರ್ಚೆ ವಿಫಲವಾದರೆ ಜೂನ್ 1ರ ವೇಳೆಗೆ ಅಮೆರಿಕದ ಖಜಾನೆ ಬರಿದಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ವರದಿ ಮಾಡಿದೆ.

ಮೇ 12ರಂದು ನಗದು ಪ್ರಮಾಣ 140 ಶತಕೋಟಿ ಡಾಲರ್ನಷ್ಟಿದ್ದು 15 ದಿನಗಳೊಳಗೆ 38.8 ಶತಕೋಟಿ ಡಾಲರ್ ಮಟ್ಟಕ್ಕೆ ಇಳಿದಿದೆ. ಇತ್ತೀಚೆಗೆ 31.4 ಲಕ್ಷಕೋಟಿ ಡಾಲರ್ನಷ್ಟು ಸರಕಾರಿ ಸಾಲ ಮರುಪಾವತಿಸಲು ಕ್ರಮ ಕೈಗೊಂಡ ಬಳಿಕ  ಹಣಕಾಸು ಇಲಾಖೆಯ ಬ್ಯಾಂಕ್ ಖಾತೆಯೂ ಕ್ಷಿಪ್ರ ವೇಗದಲ್ಲಿ ಇಳಿಕೆಯಾಗುತ್ತಿದೆ. ಆದರೆ ಸಾಲದ ಮಿತಿಯನ್ನು ಹೆಚ್ಚಿಸುವ ಸರಕಾರದ ಯೋಜನೆಗೆ ಹಲವು ಅಡ್ಡಿ ಎದುರಾಗಿದೆ.  ಸರಕಾರ ಮತ್ತು ವಿಪಕ್ಷಗಳಿಗೆ ಅನುಕೂಲವಾಗುವಂತಹ ಶಾಸನಬದ್ದ ಸಾಲದ ಮಿತಿ ರೂಪಿಸಲು ಸಮಾಲೋಚನೆ ಮುಂದುವರಿಯುತ್ತಿರುವಂತೆಯೇ ಖಜಾನೆಯ ನಗದು ಬ್ಯಾಲೆನ್ಸ್ ವೇಗವಾಗಿ ಕ್ಷೀಣಿಸುತ್ತಿದೆ.

ಅಮೆರಿಕದಲ್ಲಿ ಸರಕಾರವು ತನ್ನ ಬಿಲ್ಗಳನ್ನು ಪಾವತಿಸಲು ಎರವಲು ಪಡೆಯಬಹುದಾದ ಶಾಸನಬದ್ಧ ಹಣದ ಮೊತ್ತವನ್ನು ಸಾಲದ ಮಿತಿ(ಡೆಟ್ ಸೀಲಿಂಗ್) ಎಂದು ಕರೆಯಲಾಗುತ್ತದೆ. ಸಾಲದ ಮಿತಿಯಲ್ಲಿ ಹೆಚ್ಚಳವಾಗಬೇಕಾದರೆ ಅಲ್ಲಿನ ಸಂಸತ್ತು ಅನುಮೋದಿಸಬೇಕಾಗುತ್ತದೆ. ವಿರೋಧ ಪಕ್ಷವಾದ ರಿಪಬ್ಲಿಕ್ ಪಕ್ಷ ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಹೊಂದಿದ್ದು ಸಾಲದ ಮಿತಿ ಹೆಚ್ಚಳವನ್ನು ಅನುಮೋದಿಸಬೇಕಾದರೆ ಸರಕಾರ ಖರ್ಚು ಕಡಿತಕ್ಕೆ ಒಪ್ಪಿಕೊಳ್ಳಬೇಕು ಎಂಬ ಷರತ್ತು ಮುಂದಿರಿಸಿದೆ.

ಈ ಮಧ್ಯೆ, ತುರ್ತು ಅಗತ್ಯಗಳನ್ನು ನಿರ್ವಹಿಸಲು ಮೀಸಲಿರಿಸಲಾದ ಅಸಾಮಾನ್ಯ ಕ್ರಮಗಳೂ ಕಾಲಿಯಾಗುತ್ತಿವೆ ಎಂದು ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದ್ದಾರೆ. ಒಟ್ಟು 335 ಶತಕೋಟಿ ಡಾಲರ್ಗಳಿದ್ದ ಅಸಾಮಾನ್ಯ ಕ್ರಮಗಳ ಖಾತೆಯಲ್ಲಿ ಮೇ 24ರಂದು ಕೇವಲ 67 ಶತಕೋಟಿ ಡಾಲರ್ನಷ್ಟು ಮಾತ್ರ ಉಳಿದಿದೆ. ಹೀಗೆಯೇ ಮುಂದುವರಿದರೆ ಜೂನ್ 1ರ ವೇಳೆಗೆ ಸರಕಾರಕ್ಕೆ ಖರ್ಚು ಮಾಡಲು ಹಣವಿಲ್ಲದಂತಾಗುತ್ತದೆ ಎಂದು ಜಾನೆಟ್ ಯೆಲೆನ್ ಎಚ್ಚರಿಸಿದ್ದಾರೆ. ಇದೇ ವೇಳೆ, ಸಾಲದ ಮಿತಿ ಹೆಚ್ಚಳದ ಬಗ್ಗೆ ರಿಪಬ್ಲಿಕನ್ನರು ಮತ್ತು ಡೆಮಾಕ್ರಾಟರ ನಡುವೆ ನಡೆಯುತ್ತಿರುವ ಮಾತುಕತೆ ಯಶಸ್ವಿಯಾಗುವ ಸಾಧ್ಯತೆ ಗೋಚರಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಒಪ್ಪಂದವನ್ನು ತಲುಪಲು ವಿಫಲವಾದರೆ ಸಂಭಾವ್ಯ ಪರಿಣಾಮಗಳ ಬಗ್ಗೆ ಶ್ವೇತಭವನ ಎಚ್ಚರಿಕೆ ನೀಡಿದ್ದರೂ, ಅಮೆರಿಕ ಸಾಲ ಪಾವತಿಸದೆ ಸುಸ್ತಿದಾರನಾಗಬಹುದು ಎಂಬ ಆತಂಕವನ್ನು ಕೆಲವು ಸಂಪ್ರದಾಯವಾದಿಗಳು ತಳ್ಳಿಹಾಕಿದ್ದಾರೆ. 

Similar News