ಐಸಿಎಆರ್-ಎನ್‌ಐಎಎನ್‌ಪಿ ಜೊತೆ ಕೆಪಿಎಫ್‌ಬಿಎ ಒಪ್ಪಂದಕ್ಕೆ ಸಹಿ

Update: 2023-05-28 14:08 GMT

ಬೆಂಗಳೂರು: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಹಾಗೂ ಫಿಸಿಯಾಲಜಿ (ಎನ್‌ಐಎಎನ್‌ಪಿ) ಜೊತೆಗೆ ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಶನ್ (ಕೆಪಿಎಫ್‌ಬಿಎ) ಕುಕ್ಕುಟ ಕ್ಷೇತ್ರದ ಸಂಶೋಧನೆಗಾಗಿ ತಿಳುವಳಿಕಾ ಒಪ್ಪಂದ (ಎಂಒಯು)ಗೆ ಸಹಿ ಹಾಕಿದೆ.

ಬೆಂಗಳೂರಿನ ಐಸಿಎಆರ್-ಎನ್‌ಐಎಎನ್‌ಪಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಮತ್ತು ಕೆಪಿಫ್‌ಬಿಎ ಅಧ್ಯಕ್ಷ ಡಾ.ಬಿ. ಸುಶಾಂತ್ ರೈ ಒಪ್ಪಂದಕ್ಕೆ ಸಹಿ ಹಾಕಿದರು.

ಕುಕ್ಕುಟೋದ್ಯಮ ಕ್ಷೇತ್ರವು ಅಗಾಧ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭ ಇಂತಹ ಸಂಸ್ಥೆಯ ಸಹಯೋಗದಿಂದ ಸಂಶೋಧನೆಯ ಆವಶ್ಯಕತೆ, ವಿಶೇಷವಾಗಿ ಕುಕ್ಕುಟಗಳ ಪೋಷಣೆ ಕ್ಷೇತ್ರದಲ್ಲಿ ಆಗುತ್ತಿರುವ ವಿಚಾರಗಳು, ಪೌಷ್ಟಿಕಾಂಶದ ಸವಾಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಎದುರಿಸಲು ತಾಂತ್ರಿಕ ಜ್ಞಾನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಐಸಿಎಆರ್-ಎನ್‌ಐಎಎನ್‌ಪಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಹೇಳಿದರು.

ಡಾ.ಸುಶಾಂಶ್ ರೈ ಮಾತನಾಡಿ ರಾಜ್ಯದಲ್ಲಿ ಕುಕ್ಕುಟ ಸಾಕಾಣಿಕೆ ಕ್ಷೇತ್ರವು ಸಂಘಟಿತ ಮತ್ತು ಅಸಂಘಟಿತವಾಗಿ ಬಹಳ ದೊಡ್ಡದಾಗಿದೆ  ಗುಣಮಟ್ಟದ ಉತ್ಪನ್ನಗಳನ್ನು ನೀಡುವುದಲ್ಲದೆ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಾಗಿರಲು ಪೌಷ್ಟಿಕಾಂಶದ ಬಗ್ಗೆ ವೈಜ್ಞಾನಿಕ ಒಳಹರಿವಿನ ಅಗತ್ಯವಿದೆ. ಇದಕ್ಕೆ ಈ ಸಂಸ್ಥೆ ಜತೆಗಿನ ಒಪ್ಪಂದ ನೆರವಾಗಲಿದೆ ಎಂದರು.

ಕೆಪಿಎಫ್‌ಬಿಎ ಮಾಜಿ ಅಧ್ಯಕ್ಷ ಎಂ.ಸಿ.ಆರ್.ಶೆಟ್ಟಿ, ಕೆಪಿಎಫ್‌ಬಿಎ ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ.ಜಿ.ಬಿ. ಪುಟ್ಟಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಡಾ.ಅಂಜನ್ ಗೋಸ್ವಾಮಿ, ಕೆಪಿಎಫ್‌ಬಿಎ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್, ಕೆಪಿಎಫ್‌ಬಿಎ ಹಿರಿಯ ವಿಜ್ಞಾನಿ ಡಾ.ಉಮಾಕಾಂತ ಬಿ. ಐಸಿಎಆರ್-ಎನ್‌ಐಎಎನ್‌ಪಿಯ  ಮುಖ್ಯ ವಿಜ್ಞಾನಿ ಡಾ.ಎ.ವಿ. ಇಳಂಗೋವನ್, ಐ.ಸಿ ಪಿಎಂಇ ಡಾ.ಡಿ.ಟಿ.ಪಾಲ್, ಐ.ಸಿ ಐಟಿಎಂಯು ಡಾ.ಅತುಲ್ ಪಿ. ಕೋಲ್ಟೆ  ಉಪಸ್ಥಿತರಿದ್ದರು.

Similar News