ದ.ಕ.ಜಿಲ್ಲೆ: 2023-24ನೆ ಶೈಕ್ಷಣಿಕ ವರ್ಷದ ಶಾಲೆಗಳ ಪುನರಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ

Update: 2023-05-28 16:37 GMT

ಮಂಗಳೂರು, ಮೇ 28: ಪ್ರಸಕ್ತ (2023-24) ಶೈಕ್ಷಣಿಕ ವರ್ಷದ ಶಾಲೆಗಳ ಪುನರಾರಂಭಕ್ಕೆ ದ.ಕ.ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸಿದೆ. ಈಗಾಗಲೆ ವಲಯ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಲಾಗಿದ್ದು, ಮೇ 29 ಮತ್ತು 30ರಂದು ಶಾಲೆಗಳಲ್ಲಿ ಸ್ವಚ್ಛತೆ ಸಹಿತ ಮತ್ತಿತರ ಸಿದ್ಧತಾ ಕಾರ್ಯಗಳು ನಡೆಯಲಿವೆ.

ಈ ಎರಡೂ ದಿನಗಳಲ್ಲಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗವು ಶಾಲೆಗಳಲ್ಲಿ ಹಾಜರಿದ್ದುಕೊಂಡು ಭರದ ಸಿದ್ಧತೆ ನಡೆಸಲಿದ್ದಾರೆ. ಪ್ರತಿಯೊಂದು ತರಗತಿಗಳನ್ನು ಗುಡಿಸುವುದು, ಬೆಂಚು-ಡೆಸ್ಕ್‌ಗಳನ್ನು ಜೋಡಿಸಿಡುವುದು, ಬಿಸಿಯೂಟ ತಯಾರಿ ಕೋಣೆ ಹಾಗೂ ಶೌಚಾಲಯದ ಶುಚಿತ್ವ, ಅಡುಗೆ ಪಾತ್ರೆಗಳನ್ನು ತೊಳೆಯುವುದು ಹೀಗೆ ಎಲ್ಲಾ ಕೆಲಸ ಕಾರ್ಯಗಳು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದ.ಕ.ಜಿಲ್ಲೆಗೆ 20,19,683 ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಇದೀಗ ಎಲ್ಲಾ ಪಠ್ಯಪುಸ್ತಕಗಳನ್ನು ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತಲುಪಿಸಲಾಗಿವೆ. ಮೇ 30ರ ಬಳಿಕ ಆಯಾ ಸಿಆರ್‌ಪಿಗಳ ಮೂಲಕ ಶಾಲೆಗಳಿಗೆ ತಲುಪುತ್ತವೆ.

ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಸರಕಾರದ ವತಿಯಿಂದ ನೀಡಲಾಗುತ್ತದೆ. ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಪಠ್ಯಪುಸ್ತಕಗಳನ್ನು ಖರೀದಿಸಿ, ಮಕ್ಕಳಿಗೆ ವಿತರಣೆ ಮಾಡುತ್ತವೆ. ಅನುದಾನರಹಿತ ಶಾಲೆಗಳು ಸಲ್ಲಿಸಿದ ಬೇಡಿಕೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ.

ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ವಿತರಿಸಲು 11,14,251 ಪಠ್ಯಪುಸ್ತಕಗಳು, ಅನುದಾನರಹಿತ ಶಾಲೆಗಳ ಬೇಡಿಕೆಗೆ ಅನುಸಾರವಾಗಿ 9,05,432 ಪಠ್ಯಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಜಿಲ್ಲೆಯಿಂದ ಸಲ್ಲಿಸಲಾಗಿತ್ತು. ಅವೆಲ್ಲವೂ ಸರಬರಾಜು ಆಗಿದೆ.

1ರಿಂದ 10ನೇ ತರಗತಿವರೆಗಿನ 1,02,520 ಮಕ್ಕಳ ಸಮವಸ್ತ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಪೂರ್ಣ ಪ್ರಮಾಣದಲ್ಲಿ ಒಂದು ಜೊತೆ ಸಮವಸ್ತ್ರಗಳು ಪೂರೈಕೆಯಾಗಿವೆ. ಶೂ ಮತ್ತು ಸಾಕ್ಸ್ ಖರೀದಿಸಲು ಜೂನ್ ಮೊದಲ ವಾರದಲ್ಲಿ ಅನುದಾನ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಮೇ 29ರಂದು ಶಾಲೆಗಳ ಬಾಗಿಲು ತೆರೆಯಲಿವೆ. ಮೇ 29 ಮತ್ತು 30ರಂದು ಶುಚಿತ್ವ ಸಹಿತ ಎಲ್ಲಾ ಸಿದ್ಧತೆ ಮಾಡಲಿದ್ದಾರೆ. ಮೇ 31ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಅಂದೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗುವುದು. ಜಿಲ್ಲೆಯ ಶಾಲೆಗಳಲ್ಲಿ ನೀರಿನ ಕೊರತೆಯ ಬಗ್ಗೆ ಯಾವುದೇ ದೂರು ಈವರೆಗೆ ಬಂದಿಲ್ಲ. ಶಾಲೆಗಳು ಆರಂಭಗೊಂಡ ಬಳಿಕ ಈ ಬಗ್ಗೆ ವರದಿ ಬಂದಲ್ಲಿ ಗ್ರಾಪಂ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರಪಾಲಿಕೆಗಳ ಆಡಳಿತದ ಮೂಲಕ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು".

-ದಯಾನಂದ ಆರ್. ನಾಯಕ,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

Similar News