ಸುಡಾನ್‌ ನಿಂದ ವಿಶ್ವಸಂಸ್ಥೆ ಪ್ರತಿನಿಧಿ ತೆರವಿಗೆ ಸೇನಾಡಳಿತದ ಸೂಚನೆ: ವರದಿ

Update: 2023-05-28 18:01 GMT

ಖಾರ್ಟಮ್, ಮೇ 28: ಸುಡಾನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆ ಪ್ರತಿನಿಧಿಯನ್ನು ತಕ್ಷಣ ವಾಪಾಸು ಕರೆಸಿಕೊಳ್ಳುವಂತೆ ಸುಡಾನ್ನ ಸೇನಾಡಳಿತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

‘ಸುಡಾನ್ ಸೇನೆಯ ಮುಖ್ಯಸ್ಥ ಮತ್ತು ಆಡಳಿತಾರೂಢ ಸಾರ್ವಭೌಮ ಸಮಿತಿಯ ಮುಖ್ಯಸ್ಥ ಜ ಅಬ್ದುಲ್ ಫತಾಹ್ ಬರ್ಹಾನ್ ಬರೆದಿರುವ ಪತ್ರ ತಲುಪಿದ್ದು   ಪತ್ರದ ಸಾರಾಂಶ ಓದಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಆಘಾತಗೊಂಡರು. ಸುಡಾನ್ನಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ವೋಕರ್ ಪರ್ತೆಸ್ ಅವರ ಕಾರ್ಯನಿರ್ವಹಣೆಯ ಬಗ್ಗೆ ಗುಟೆರಸ್ಗೆ ಸಂಪೂರ್ಣ ತೃಪ್ತಿಯಿದೆ ಮತ್ತು ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ’ ಎಂದು ಗುಟೆರಸ್ ಅವರ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ. ಪತ್ರದ ಸಾರಾಂಶದ ಬಗ್ಗೆ ಡ್ಯುಜೆರಿಕ್ ವಿವರಿಸಿಲ್ಲ. ಆದರೆ ಉನ್ನತ ಮೂಲಗಳ ಪ್ರಕಾರ, ಪರ್ತೆಸ್ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡುವಂತೆ ಬರ್ಹಾನ್ ಆಗ್ರಹಿಸಿದ್ದಾರೆ. ಪರ್ತೆಸ್ರನ್ನು ಸುಡಾನ್ಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿ 2021ರಲ್ಲಿ ನೇಮಕಗೊಳಿಸಲಾಗಿದೆ.

ಪರ್ತೆಸ್  ಪಕ್ಷಪಾತದಿಂದ ವರ್ತಿಸಿದ್ದಾರೆ. ಯುದ್ದಕ್ಕೂ ಮುನ್ನ  ಸೇನಾಪಡೆಯ ಜನರಲ್ಗಳು ಹಾಗೂ ಪ್ರಜಾಪ್ರಭುತ್ವ ಪರ ಚಳವಳಿಗಾರರ ನಡುವೆ  ನಡೆದಿದ್ದ ಸಂಧಾನ ಮಾತುಕತೆಯಲ್ಲಿ ಅವರ ಧೋರಣೆ ಮತ್ತು ನಿಲುವು ಬಿಕ್ಕಟ್ಟನ್ನು ಉಲ್ಬಣಿಸಿದೆ ಎಂದು ಬರ್ಹನ್ ಬರೆದಿರುವ ಪತ್ರದಲ್ಲಿ ಆರೋಪಿಸಲಾಗಿದೆ. 2021ರಲ್ಲಿ ಸೇನೆಯ ಕ್ಷಿಪ್ರದಂಗೆಯ ಬಳಿಕ ಹಳಿತಪ್ಪಿದ್ದ ಪ್ರಜಾಪ್ರಭುತ್ವದ ಮರುಸ್ಥಾಪನೆಯ ಉದ್ದೇಶದಿಂದ ನಡೆದಿದ್ದ ಈ ಮಾತುಕತೆ ವಿಫಲವಾಗಿತ್ತು.

 ಪರ್ತೆಸ್ ವಿಶ್ವಸಂಸ್ಥೆ ನಿಯೋಗದ ಅಧಿಕಾರವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸುಡಾನ್ನ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬರ್ಹಾನ್ ಕಳೆದ ವರ್ಷ ಆರೋಪಿಸಿದ್ದರು.

ಸುಡಾನ್ನಲ್ಲಿ ಸಂಘರ್ಷದಲ್ಲಿ ತೊಡಗಿರುವ ಎರಡೂ ತಂಡಗಳು(ಸೇನಾಪಡೆ ಮತ್ತು ಅರೆಸೇನಾ ಪಡೆ) ಯುದ್ಧದ ನಿಯಮವನ್ನು ಕಡೆಗಣಿಸಿದ್ದು ಮನೆಗಳು, ಅಂಗಡಿ, ಪ್ರಾರ್ಥನಾ ಸ್ಥಳಗಳು, ನೀರು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಎಸಗುತ್ತಿದ್ದಾರೆ ಎಂದು ವೋಕರ್ ಪರ್ತೆಸ್ ಇತ್ತೀಚೆಗೆ ಆರೋಪಿಸಿದ್ದರು. ಜತೆಗೆ, ಸುಡಾನ್ನಲ್ಲಿ ಈಗ ತಲೆದೋರಿರುವ ಅವ್ಯವಸ್ಥೆಗೆ ಸೇನಾಪಡೆ ಮತ್ತು ಅರೆಸೇನಾ ಪಡೆ ಎರಡೂ ಹೊಣೆಯಾಗಿವೆ. ಇವರಿಬ್ಬರು ತಮ್ಮೊಳಗಿನ ಸಮಸ್ಯೆಯನ್ನು ಸಂಧಾನದ ಮೇಜಿನಲ್ಲಿ ಇತ್ಯರ್ಥಪಡಿಸುವ ಬದಲು ಯುದ್ಧಕ್ಷೇತ್ರದಲ್ಲಿ ಇತ್ಯರ್ಥಪಡಿಸುವ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಳೆದ ವಾರ ವರದಿ ನೀಡಿದ್ದರು.

ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಎಪ್ರಿಲ್ ಮಧ್ಯಭಾಗದಲ್ಲಿ ಭುಗಿಲೆದ್ದಿರುವ ಘರ್ಷಣೆಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದು ಸಾವಿರಾರು ಮಂದಿ ಗಾಯಗೊಂಡಿದ್ದು ದೇಶವನ್ನು ಪತನದ ಅಂಚಿಗೆ ತಂದಿರಿಸಿದೆ. ಸುಮಾರು 1.3 ದಶಲಕ್ಷ ಮಂದಿ ಯುದ್ಧಗ್ರಸ್ತ ಪ್ರದೇಶದಿಂದ ಪಲಾಯನ ಮಾಡಿದ್ದಾರೆ. ದೇಶದೆಲ್ಲೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ಅಸಹಾಯಕ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ ಹೆಚ್ಚಿದ್ದು ರಾಜಧಾನಿ ಖಾರ್ಟಮ್ನಲ್ಲಿ 24 ಮತ್ತು ದರ್ಫೂರ್ ಪ್ರಾಂತದಲ್ಲಿ 25 ಅತ್ಯಾಚಾರ ಪ್ರಕರಣ ವರದಿಯಾಗಿದೆ. ದೌರ್ಜನ್ಯ ಎಸಗಿದವರು ಅರೆಸೇನಾ ಪಡೆಯ ಸಮವಸ್ತ್ರ ಧರಿಸಿದ್ದರು ಎಂದು ಸಂತ್ರಸ್ತ ಮಹಿಳೆಯರು ಮಾಹಿತಿ ನೀಡಿರುವುದಾಗಿ ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಯುವ ಸಂಘಟನೆ ವರದಿ ಮಾಡಿದೆ. 

Similar News