ಸಂವಿಧಾನವನ್ನು ಉಲ್ಲಂಘಿಸುವ ಸಂಘಟನೆಗಳ ವಿರುದ್ಧ ಮಾತ್ರ ಕ್ರಮ: ಡಾ.ಜಿ.ಪರಮೇಶ್ವರ್

Update: 2023-05-28 18:07 GMT

ಬೆಂಗಳೂರು, ಮೇ 28: ‘ಸರಕಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ. ತಕ್ಷಣವೇ ಯಾವುದೇ ಸಂಸ್ಥೆಯನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಸಂವಿಧಾನ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಆಗುತ್ತದೆ. ಕಾನೂನು ಉಲ್ಲಂಘನೆ ಮಾಡದೇ ಇದ್ದರೆ ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ತಮ್ಮ ನಿವಾಸಕ್ಕೆ ಆಗಮಿಸಿದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗೆ ಗೌರವ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳಿಗೆ ಒಂದು ಸರಕಾರ ಹೇಗೆ ನಡೆಯುತ್ತದೆ ಎಂಬುದೂ ಗೊತ್ತಿಲ್ಲವೇ? ಜನರೇ ಇವರನ್ನು ಮನೆಯಲ್ಲಿ ಕೂರಿಸಿದರೂ ಬುದ್ದಿ ಬರುತ್ತಿಲ್ಲ? ಅನಗತ್ಯ ರಾಜಕೀಯ ಅಸ್ತ್ರವಾಗಿ ಬಳಸಿಕೊಳುತ್ತಿದ್ದಾರೆ’ ಎಂದು ದೂರಿದರು.

‘ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿದ್ದೇವೆ. ಅಕ್ಕಿ ಹೊಂದಿಸಿಕೊಳ್ಳಲು ಸಮಯ ಬೇಡವೇ? ಮಾನದಂಡಗಳು ಪ್ರತಿಪಕ್ಷಗಳು ಹೇಳಿದ ರೀತಿಯಲ್ಲಿ ಏನೂ ಇರುವುದಿಲ್ಲ. ನಾವು ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ಇನ್ನೂ ನಿಯಮಗಳನ್ನೇ ಹೇಳಿಲ್ಲ. ಆಗಲೇ ರಾಜಕೀಯ ಮಾಡುತ್ತಿದ್ದಾರೆ’ ಎಂದು ಪರಮೇಶ್ವರ್ ಆರೋಪಿಸಿದರು. 

Similar News