ಬೆಂಗಳೂರು | ಪ್ರಧಾನಿಗೆ 15 ರೂ. ಮನಿ ಆರ್ಡರ್ ಕಳುಹಿಸಿ ಕಾಂಗ್ರೆಸ್ ಪ್ರತಿಭಟನೆ

Update: 2023-05-30 10:17 GMT

ಬೆಂಗಳೂರು, ಮೇ 30: ಪ್ರಧಾನಿ ನರೇಂದ್ರ ಮೋದಿ ಸರಕಾರ ಬಂದು 9 ವರ್ಷಗಳಾದರೂ 15 ಲಕ್ಷ ರೂ. ಯಾರ ಬ್ಯಾಂಕ್ ಖಾತೆಗೂ ಹಾಕಲಿಲ್ಲ. ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು 15 ರೂಪಾಯಿಯನ್ನು ಮನಿ ಆರ್ಡರ್  ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಿ ವಿಶಿಷ್ಟವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.

ಇಂದು ಪೂರ್ವಾಹ್ನ 11:30ರ ವೇಳೆ ವಿಧಾನಸೌಧ ಮುಂಭಾಗದ ಜಿಪಿಓ ಕೇಂದ್ರ ಕಚೇರಿಯಿಂದ ಪ್ರದಾನಿಗೆ 15 ರೂ.  ಮನಿ ಆರ್ಡರ್  ಅನ್ನು ಪೋಸ್ಟ್ ಮಾಡಲಾಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ 9 ವರ್ಷದ 'ಅಚ್ಛೇ ದಿನ್' ಸರ್ಕಾರದಲ್ಲಿ 15 ಲಕ್ಷ ಹಣ ಯಾರ ಖಾತೆಗೂ ಹಾಕಲಿಲ್ಲ. ಇದಕ್ಕಾಗಿ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಪಕ್ಷದಿಂದ ಅವರಿಗೆ 15 ರೂಪಾಯಿಯನ್ನು ಮನಿ ಆರ್ಡರ್  ಮೂಲಕ ಕಳುಹಿಸಿಕೊಟ್ಟಿರುವುದಾಗಿ ಪ್ರತಿಭಟನಕಾರರು ತಿಳಿಸಿದ್ದಾರೆ.

 9 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ರವರು ರಾಷ್ಟ್ರದ  ಜನತೆಗೆ ನೀಡಿದ ಎಲ್ಲಾ ಭರವಸೆಗಳು  ಇಂದು ಸುಳ್ಳಾಗಿದೆ. 1 ಹೊರ ದೇಶದಲ್ಲಿರುವ ಕಪ್ಪು ಹಣ ತರಲಿಲ್ಲ.  ಪ್ರತಿಯೊಬ್ಬ ಖಾತೆಗೂ 15 ಲಕ್ಷ ಹಾಕುತ್ತೇವೆ ಎಂದು ಹೇಳಿದರು ಯಾರ ಖಾತೆಗೂ 15 ರೂ. ಸಹ ಇದುವರೆಗೂ ಬಂದಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು ನರೇಂದ್ರ ಮೋದಿ ಹೇಳಿದ್ದರು. ಆದರೆ ಇರುವ ಉದ್ಯೋಗವು ಸಹ  ಎಲ್ಲರಿಂದ ಕಸಿಯುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದರು ಭ್ರಷ್ಟ ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡರು. ಅಚ್ಚೆ ದಿನ್ ಅಚ್ಚೆ ದಿನ್  ಎಂದು ನಿತ್ಯವೂ ಹೇಳಿ  ಪ್ರತಿಯೊಬ್ಬರ ಮೇಲು ಸಾಲದ ಹೊರೆಯನ್ನು ಹೊರಿಸಿದರು ನರೇಂದ್ರ ಮೋದಿ.  ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ತೆರಿಗೆ ಹಣವನ್ನು ವಂಚಿಸಿರುವ ಉದ್ಯಮಗಳೊಂದಿಗೆ ಶಾಮಿಲಾಗಿ ಅವರನ್ನು ಹೊರದೇಶಕ್ಕೆ ಕಳುಹಿಸಿದ್ದಾರೆ. ದೇಶದ ಅನ್ನದಾತರಿಗೆ ನ್ಯಾಯಯುತವಾದ ಕಾಯ್ದೆಯನ್ನು ತರದೆ ರೈತ ವಿರೋಧಿ ಮಸೂದೆಯನ್ನು ಜಾರಿಗೆ ತಂದು ಅಪರಾಧ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಈ ಸಂದರ್ಭದಲ್ಲಿ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್, ಮನೋಹರ್, ಪಕ್ಷದ ಮುಖಂಡರಾದ, ಎ.ಆನಂದ್, ಪ್ರಕಾಶ್, ರವಿಶೇಖರ್, ಹೇಮರಾಜು, ಚಂದ್ರಶೇಖರ್, ಅನಿಲ್ ಕುಮಾರ್, ಉಮೇಶ್, ಚಿನ್ನಿ ಪ್ರಕಾಶ್, ಓಬಳೇಶ್ ಮತ್ತಿತರರು ಹಾಜರಿದ್ದರು.

Similar News