ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಗೆ ಜೈಲು ಶಿಕ್ಷೆ, ದಂಡ

Update: 2023-05-30 14:25 GMT

ಮಂಗಳೂರು, ಮೇ 30: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ನ್ಯಾಯಾಲಯವು 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಾಸರಗೋಡು ಚೆರ್ಕಳದ ರಾಜೀವ್ ಪಿ.ಎಂ (37) ಶಿಕ್ಷೆಗೊಳಗಾದ ಆರೋಪಿ.

ಈತ 2019ರ ಜೂ.28ರಂದು ಬಾಲಕಿ ಟ್ಯೂಷನ್ ಮುಗಿಸಿ ಮನೆ ಕಡೆಗೆ ಹೋಗುತ್ತಿದ್ದಾಗ ನಗರದ ಲೇಡಿಹಿಲ್‌ನಿಂದ ಹಿಂಬಾಲಿಸಿಕೊಂಡು ಬಂದು, ಅಡ್ಡಗಟ್ಟಿ ಕೈಯನ್ನು ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳಿಕೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1 ಪೊಕ್ಸೊ) ನ್ಯಾಯಾಧೀಶೆ ಮಂಜುಳಾ ಇಟ್ಟಿ ಆರೋಪಿಗೆ ಐಪಿಸಿ ಕಲಂ 341ರಂತೆ ಒಂದು ತಿಂಗಳ ಸಾದಾ ಸಜೆ, ಕಲಂ 354ರಡಿ ಒಂದು ವರ್ಷದ ಸಾದಾ ಸಜೆ ಮತ್ತು 1,000 ರೂ. ದಂಡ ಹಾಗೂ ಪೊಕ್ಸೊ ಕಾಯ್ದೆ ಕಲಂ 8ರ ಅಡಿ ಮೂರು ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸಂತ್ರಸ್ತ ಬಾಲಕಿಗೆ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನದೇವಿ ವಾದ ಮಂಡಿಸಿದ್ದಾರೆ.

Similar News