ದ.ಕ. ಜಿಲ್ಲೆಯಲ್ಲಿ ಹತ್ಯೆಯಾದ ಮೂರೂ ಕುಟುಂಬಗಳಿಗೆ ಪರಿಹಾರ ನೀಡಬೇಕು: ಅಶ್ರಫ್ ಕಲ್ಲೇಗ

Update: 2023-05-30 16:58 GMT

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ನಡೆದ ಮೂರು ಹತ್ಯೆಗಳ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಿದ್ದು, ಕೇವಲ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಮಾತ್ರ ಪರಿಹಾರ, ಸರ್ಕಾರಿ ಕೆಲಸವನ್ನು ನೀಡಿದೆ. ಪ್ರಸ್ತುತ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಮೂರು ಕುಟುಂಬಗಳಿಗೂ ರೂ.25 ಲಕ್ಷ ಪರಿಹಾರ ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ದಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅವರು ಮಂಗಳವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಶರಣ್ ಪಂಪುವೆಲ್ ಹೇಳಿಕೆ ಪ್ರಕಾರ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಮೂರು ಹತ್ಯೆಗಳನ್ನು ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.25 ಲಕ್ಷ ನೀಡಿದೆ. ಅವರ ಪತ್ನಿಗೂ ಸರ್ಕಾರದ ಕಚೇರಿಯಲ್ಲಿ ಕೆಲಸವೂ ನೀಡಿದೆ.  ಅದೇ ರೀತಿಯಲ್ಲಿ ದುಷ್ಕರ್ಮಿಗಳ ಹತ್ಯೆಗೆ ಒಳಗಾದ ಬೆಳ್ಳಾರೆಯ ಮಸೂದ್, ಫಾಝಿಲ್ ಕಾಟಿಪಳ್ಳ ಹಾಗೂ ಕೃಷ್ಣಾಪುರದ ಜಲೀಲ್ ಎಂಬವರ ಹತ್ಯೆಗೆ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಬಿಜೆಪಿ ಸರ್ಕಾರದ ತಾರತಮ್ಯ ನೀತಿ ಅನುಸರಿಸಿದ ಪರಿಣಾಮ ಈ ಕುಟುಂಬಗಳಿಗೆ ಯಾವ ನೆರವೂ ಸಿಕ್ಕಿಲ್ಲ.

ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಕುಟುಂಬಗಳಿಗೆ ಪರಿಹಾರ ನೀಡುತ್ತೇವೆ ಎಂದು ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ  ಭರವಸೆ ನೀಡಿದ್ದರು. ಇದೀಗ ಸರ್ಕಾರ ಆಡಳಿತಕ್ಕೆ ಬಂದಿದೆ. ಮುಖ್ಯಮಂತ್ರಿಗಳು ಈ ಹಿಂದೆ ನೀಡಿದ್ದ ಭರವಸೆಯಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು.  ಇಲ್ಲದಿದ್ದಲ್ಲಿ ಸಿದ್ದರಾಮಯ್ಯ ಅವರ ಭರವಸೆ ಸುಳ್ಳಾಗಿದೆ ಎಂದು ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಇತರ ಸಮಾನ ಸಂಘಟನೆಗಳ ಸಹಕಾರದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯೊಳಗೇ ಹಲವು ಅನುಮಾನಗಳು ಹರಡಿತ್ತು. ಈ ಹತ್ಯೆಯ ವಿಚಾರದಲ್ಲಿ ಸಂಶಯವಿದೆ. ಈ ಹಿಂದಿನ ತನಿಖೆ ಮಾಡಿದ ಅಧಿಕಾರಿಗಳಲ್ಲಿ ನಮಗೆ ವಿಶ್ವಾಸ ಇಲ್ಲ. ಪ್ರಾಮಾಣಿಕ ಅಧಿಕಾರಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ತಂಡದಿಂದ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಮರು ತನಿಖೆ ನಡೆಸಬೇಕು. ಮಸೂದ್, ಫಾಝಿಲ್ ಮತ್ತು ಜಲೀಲ್ ಹತ್ಯೆ ಪ್ರಕರಣದ ತನಿಖೆಯನ್ನೂ ಎನ್‍ಐಎಗೆ ಒಪ್ಪಿಸಬೇಕು  ಎಂದು ಅವರು ಆಗ್ರಹಿಸಿದರು.

ಅರುಣ್ ಪುತ್ತಿಲ ಬ್ರಿಗೇಡ್ ಪಾಣಾಜೆ ಎಂಬ ವಾಟ್ಸಾಪ್ ಗ್ರೂ‌ಪ್ ನಲ್ಲಿ ಸಂದೀಪ್ ಪನಿಯನ್ ಎಂಬಾತ ನಮಾಝ್‌ ಬಗ್ಗೆ ವ್ಯಂಗ್ಯಚಿತ್ರ ಹಾಕಿ ಅವಹೇಳನ ಮಾಡಿದ್ದು, ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈತನ ಕೃತ್ಯದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅವರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಜತೆ ಕಾರ್ಯದರ್ಶಿ ನೌಶಾದ್ ಬೊಳುವಾರು ಹಾಗೂ ಸದಸ್ಯ ಝೈನುದ್ದೀನ್ ವಿಟ್ಲ ಉಪಸ್ಥಿತರಿದ್ದರು. 

Similar News