ತಂಬಾಕು ಎಂಬ ಸಾವಿನ ಬಾಗಿಲು

ಇಂದು ವಿಶ್ವ ತಂಬಾಕು ರಹಿತ ದಿನ

Update: 2023-05-31 07:41 GMT

ಮೇ 31ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಿ ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ಮತ್ತು ದುಷ್ಪರಿಣಾಮಗಳನ್ನು ಜನರಿಗೆ ಮನದಟ್ಟು ಮಾಡುವ ಕಾರ್ಯವನ್ನು ಜಗತ್ತಿನಾದ್ಯಂತ ಮಾಡಲಾಗುತ್ತಿದೆ. 1987ರಿಂದ ಈ ಆಚರಣೆಯನ್ನು ವಿಶ್ವಾದ್ಯಂತ ವಿಶ್ವ ಸಂಸ್ಥೆ ಜಾರಿಗೆ ತಂದಿತು. 1987ರಲ್ಲಿ ಎಪ್ರಿಲ್ 7ರಂದು ವಿಶ್ವ ತಂಬಾಕು ರಹಿತ ದಿನವೆಂದು ಆಚರಣೆ ಆರಂಭಿಸಲಾಯಿತು, ಆದರೆ 1988ರಲ್ಲಿ ಈ ದಿನವನ್ನು ಮೇ 31ಕ್ಕೆ ಬದಲಾವಣೆ ಮಾಡಿ ಪ್ರತೀ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. 

ಒಂದು ಅಂದಾಜಿನ ಪ್ರಕಾರ, ಜಾಗತಿಕವಾಗಿ ತಂಬಾಕು ಸುಮಾರು 8.5 ಮಿಲಿಯನ್ ಮಂದಿಯನ್ನು ವರ್ಷ ಒಂದರಲ್ಲಿ ಆಪೋಷನ ತೆಗೆದುಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ಈ ಸಂಖ್ಯೆ ದ್ವಿಗುಣವಾಗುತ್ತಲೇ ಹೋಗುತ್ತದೆ. ಇಂದಿನ ಜಾಗತೀಕರಣಗೊಂಡ ಆಧುನಿಕ ಜಗತ್ತಿನಲ್ಲಿ ಸಿಗರೇಟ್ ಸೇವನೆ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಪ್ಯಾಷನ್ ಮತ್ತು ಪ್ರತಿಷ್ಠೆಯಾಗಿ ಮಾರ್ಪಾಡಾಗಿದೆ. ದೃಶ್ಯ ಮಾಧ್ಯಮ, ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ತಂಬಾಕು ಉತ್ಪನ್ನಗಳ ವೈಭವೀಕರಣದಿಂದಾಗಿ ಇಂದಿನ ಯುವಕ-ಯುವತಿಯರು ಬಹು ಬೇಗ ದಾರಿ ತಪ್ಪಿ, ಧೂಮಪಾನದ ಮೋಜಿಗೆ ಬಲಿಯಾಗಿ ಲಕ್ಷಾಂತರ ಮಂದಿ ನತದೃಷ್ಟರು ದಿನ ನಿತ್ಯ ಸಾವಿನ ಕೂಪಕ್ಕೆ ಬಲಿಯಾಗುತ್ತಿದ್ದಾರೆ. 

ತಂಬಾಕು ಮತ್ತು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಗುಟ್ಕಾ ಇತ್ಯಾದಿಗಳೆಲ್ಲವೂ ಕ್ಷಣಿಕ ಸುಖ ನೀಡುವ, ಜೀವಂತ ವ್ಯಕ್ತಿಯನ್ನು ಕ್ಷಣ ಕ್ಷಣಕ್ಕೂ ಕೊಲ್ಲುವ  ಮತ್ತು ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಬಾಂಬ್ ಇದ್ದಂತೆ ಎಂದರೆ ಅತಿಶಯೋಕ್ತಿಯಾಗದು. ಜಗತ್ತಿನ ಮಾರಕ ರೋಗವಾದ ಕ್ಯಾನ್ಸರಿಗೆ ಕಾರಣವಾಗುವ ಬಹಳ ಮೂಲಭೂತ ವಸ್ತು ಎಂದರೆ ತಂಬಾಕು ಉತ್ಪನ್ನಗಳು ಎನ್ನುವ ಕಟು ಸತ್ಯವನ್ನು ಜನರು ಮರೆಯಲೇಬಾರದು. ಜಗತ್ತಿನಲ್ಲಿ ಅತ್ಯಂತ ಸುಲಭವಾಗಿ ಸಾವು ಮತ್ತು ರೋಗವನ್ನು ತಡೆಗಟ್ಟಬಹುದಾದ ಕಾರಣಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಅಗ್ರ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಈ ತಂಬಾಕು ಉತ್ಪನ್ನಗಳ ಬಳಕೆ ಹಲವಾರು ರೀತಿಯ ಕ್ಯಾನ್ಸರ್ಗಳಾದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಹೃದಯಾಘಾತ, ಮೆದುಳಿನ ಆಘಾತ ಅಥವಾ ಸ್ಟ್ರೋಕ್, ಶ್ವಾಸಕೋಶದ ರೋಗಗಳು, ಅಂಧತ್ವ ಮುಂತಾದ ಹಲವಾರು ತೊಂದರೆಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. 

ತಂಬಾಕು ಮತ್ತು ಶ್ವಾಸಕೋಶದ ತೊಂದರೆಗಳು

ಶ್ವಾಸಕೋಶದ ಕ್ಯಾನ್ಸರ್ಗೆ ಅತ್ಯಂತ ಪ್ರಮಖ ಮತ್ತು ಸಾಮಾನ್ಯ ಕಾರಣವೆಂದರೆ ಧೂಮಪಾನ. ಹಾಗೆಂದ ಮಾತ್ರಕ್ಕೆ ಧೂಮಪಾನ ಮಾಡದವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಬಾರದೆಂದಿಲ್ಲ. ಸಾವಿರದಲ್ಲಿ ಒಬ್ಬರಿಗೆ ಬರಲೂಬಹುದು. ಆದರೆ ನೂರರಲ್ಲಿ ತೊಂಬತ್ತು ಮಂದಿ ಶ್ವಾಸಕೋಶದ ಕ್ಯಾನ್ಸರ್ ಇರುವವರಿಗೆ ತಂಬಾಕಿನ ಚಟ ಇದ್ದೇ ಇರುತ್ತದೆ. ಇದಲ್ಲದೆ ತಂಬಾಕಿನ ಅತಿಯಾದ ಬಳಕೆಯಿಂದ ಶ್ವಾಸಕೋಶದ ಒಳಭಾಗದಲ್ಲಿ ಉರಿಯೂತ ಉಂಟಾಗಿ ಶ್ವಾಸಕೋಶದ ದ್ರವ್ಯಗಳು ಗಟ್ಟಿಯಾಗಿ ಬಹಳಷ್ಟು ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ತಂಬಾಕು ಸೇವಿಸುವ ನೂರು ಮಂದಿಯಲ್ಲಿ 95 ಮಂದಿಗೆ ಈ ರೋಗ ಬಂದೇ ಬರುತ್ತದೆ. ಇನ್ನು ಮಕ್ಕಳಲ್ಲಿ ಶ್ವಾಸಕೋಶ ಬಹಳ ಚಂಚಲವಾಗಿರುತ್ತದೆ. ಬೇರೆಯವರು ಧೂಮಪಾನ ಮಾಡಿದ ಹೊಗೆಯಿಂದಲೇ ಮಕ್ಕಳ ಶ್ವಾಸಕೋಶ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು ಮತ್ತು ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಹೆತ್ತವರು ಸದಾಕಾಲ ಧೂಮಪಾನ ಮಾಡುವುದರಿಂದ ಸಣ್ಣ ಮಕ್ಕಳಿಗೂ ಶ್ವಾಸಕೋಶದ ತೊಂದರೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲೇ ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ತಂಬಾಕು ಸೇವನೆ ಅಥವಾ ಧೂಮಪಾನ ಮಾಡುವುದರಿಂದ ಮತ್ತಷ್ಟು ಶ್ವಾಸಕೋಶಕ್ಕೆ ಹಾನಿಯಾಗಿ ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗುತ್ತದೆ.

ತಂಬಾಕು ಏಕೆ ಮಾರಕ?

ಜಾಗತಿಕವಾಗಿ ವಿಶ್ವದಲ್ಲಿ ವಾರ್ಷಿಕವಾಗಿ 8.5 ಮಿಲಿಯನ್ ಅಂದರೆ 85 ಲಕ್ಷ ಮಂದಿ ತಂಬಾಕಿನ ಬಳಕೆಯಿಂದ ಸಾಯುತ್ತಾರೆ. ಇದರಲ್ಲಿ 10 ಲಕ್ಷ ಮಂದಿ, ತಾವು ತಂಬಾಕು ಸೇವನೆ ಮಾಡದಿದ್ದರೂ ಇತರರು ತಂಬಾಕು ಸೇವಿಸಿದ ಪರಿಣಾಮವಾಗಿ, ಅವರಿಗೂ ತಂಬಾಕಿನ ರಾಸಾಯನಿಕಯುಕ್ತ ಹೊಗೆ ಶ್ವಾಸಕೋಶಕ್ಕೆ ಸೇರಿ ಸಾವಿನಲ್ಲಿ ಪರ್ಯಾವಸಾನವಾಗುವುದು ಬಹಳ ದುರದೃಷ್ಟಕರ ಮತ್ತು ವಿಷಾದನೀಯ. ಆದರೂ ನಮ್ಮ ಯುವ ಜನತೆ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತಿದ್ದಾರೆ. ನಮ್ಮ ಭಾರತ ದೇಶವೊಂದರಲ್ಲಿಯೇ 10 ರಿಂದ 12 ಕೋಟಿ ತಂಬಾಕು ಬಳಕೆದಾರರು ಇದ್ದು ಸುಮಾರು 1 ಕೋಟಿ ಜನರು ತಂಬಾಕು ಸಂಬಂಧಿ ರೋಗಗಳಿಗೆ ತುತ್ತಾಗುತ್ತಾರೆ.

ಈ ತಂಬಾಕು ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿಯೇ ಹಿಂದಿನ ಕಾಲದಲ್ಲಿ 50 ಮತ್ತು 60ರ ಹರೆಯದಲ್ಲಿ ಬರುತ್ತಿದ್ದ ಕ್ಯಾನ್ಸರ್ ಈಗ  30-40ರ ಆಸುಪಾಸಿನಲ್ಲಿ ಬರುತ್ತಿರುವುದು ಬಹಳ ಖೇದಕರ. ಅದರಲ್ಲೂ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್ ಯುವ ಜನರಲ್ಲಿ ಹೆಚ್ಚು ಕಾಣಿಸುತ್ತಿರುವುದು ಬಹಳ ನೋವಿನ ವಿಚಾರ. ಅಧಿಕ ತಂಬಾಕು ಬಳಕೆಯಿಂದಾಗಿ, ಅಧಿಕ ರಕ್ತದೊತ್ತಡ, ಹೃದಯಾಘಾತ, ರಕ್ತದಲ್ಲಿ ಹೆಚ್ಚಿದ ಕೊಬ್ಬಿನ ಅಂಶ, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಉಸಿರಾಟ ತೊಂದರೆ, ಅಂಧತ್ವ, ದೃಷ್ಟಿ ಮಾಂದ್ಯತೆ, ಎಲುಬು ಸವೆತ ಮುಂತಾದ ಹತ್ತು ಹಲವಾರು ರೋಗಗಳು ಕಂಡು ಬರುತ್ತದೆ. ಇನ್ನು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್, ಮುಟ್ಟಿನ ತೊಂದರೆ, ಲೈಂಗಿಕ ನಿರಾಸಕ್ತಿ, ಬಂಜೆತನ, ಅಕಾಲಿಕ ಗರ್ಭಪಾತ ಮುಂತಾದ ಹತ್ತು ಹಲವು ಸಮಸ್ಯೆಗಳು ಒಟ್ಟಾಗಿ ಕಾಣಿಸುತ್ತದೆ. 

► ಕೊನೆ ಮಾತು

ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಂದ 10 ವರ್ಷಗಳ ಮೊದಲೇ ಸಾಯುತ್ತಾನೆಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಖಂಡಿತವಾಗಿಯೂ ಹತ್ತಾರು ಕಾಯಿಲೆಗಳು ಬಂದೇ ಬರುತ್ತದೆ ಎಂಬ ಸತ್ಯದ ಅರಿವಿದ್ದೂ, ಜನರು ಅದಕ್ಕೆ ದಾಸರಾಗಿ ಹತ್ತಾರು ರೋಗಗಳನ್ನು ದಿನ ನಿತ್ಯ ಆಹ್ವಾನಿಸಿಕೊಳ್ಳುತ್ತಿರುವುದು ವೈದ್ಯ ಲೋಕಕ್ಕೆ ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧ, ತಂಬಾಕು ಜಾಹೀರಾತು ನಿರ್ಬಂಧ, ಶಾಲೆಗಳ ಸುತ್ತತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಇವೆಲ್ಲವನ್ನೂ ಸರಕಾರಗಳು ಮಾಡಿದರೂ, ಜನರು ತಮ್ಮ ಇಚ್ಛಾಶಕ್ತಿಯನ್ನು ಬಳಸಿಕೊಂಡು, ತಮ್ಮ ಜವಾಬ್ದಾರಿ ಅರಿತು ತಂಬಾಕು ಉತ್ಪನ್ನಗಳಿಂದ ದೂರ ಇರಬೇಕು. ಕಾನೂನಿನ ಶಿಕ್ಷೆಗೆ ಹೆದರಿ ಯಾರೂ ತಂಬಾಕು ಬಳಸದೆ ಇರಲಾರರು. ಈ ವಿಚಾರದಲ್ಲಿ ಜನರ ಪಾಲುದಾರಿಕೆ ಮತ್ತು ಪಾಲುಗೊಳ್ಳುವಿಕೆ ಅತೀ ಅಗತ್ಯ.  ಹಾಗಾದಲ್ಲಿ ಮಾತ್ರ ಈ ವಿಶ್ವ ತಂಬಾಕು ರಹಿತ ದಿನ ಆಚರಣೆಗೆ ಹೆಚ್ಚು ಮೌಲ್ಯ ಬಂದೀತು.               

Similar News