ಹಲ್ಲುಜ್ಜುವುದರಲ್ಲಿ ಭಾರತೀಯರಿಗಿಂತ ಜಪಾನೀಯರು ಮುಂದು: ಅಂಕಿಅಂಶಗಳು ಹೇಳುವುದೇನು?

Update: 2023-04-17 16:25 GMT

ಹೊಸದಿಲ್ಲಿ: ಇತ್ತೀಚಿನ ಜಾಗತಿಕ ಬಾಯಿ ಆರೋಗ್ಯ ಮೌಲ್ಯಮಾಪನ ವರದಿ ಪ್ರಕಾರ, ಬಹುತೇಕ ಭಾರತೀಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದಿಲ್ಲ ಹಾಗೂ ಅತ್ಯಂತ ಸಿಹಿ ಹಲ್ಲು ಹೊಂದಿರುವವರು ಭಾರತೀಯರೇ ಆಗಿದ್ದಾರೆ ಎಂದು ಹೇಳಲಾಗಿದೆ. ದತ್ತಾಂಶ ಲಭ್ಯವಿರುವ ಆರು ರಾಷ್ಟ್ರಗಳಲ್ಲಿ ಕೇವಲ ಶೇ. 45ರಷ್ಟು ಭಾರತೀಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೆ, ಚೀನಾ, ಕೊಲೊಂಬಿಯಾ, ಇಟಲಿ ಹಾಗೂ ಜಪಾನ್‌ನಲ್ಲಿ ಶೇ. 78-83ರಷ್ಟು ಮಂದಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ ಎಂದು ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವವರಿಂದ ತಿಳಿದು ಬಂದಿದೆ ಎಂದು newindianexpress.com ವರದಿ ಮಾಡಿದೆ.

ಬಾಯಿ ಆರೋಗ್ಯದ ಕುರಿತು ದತ್ತಾಂಶವನ್ನು ಸಂಗ್ರಹಿಸುವ ಬಾಯಿ ಆರೋಗ್ಯ ಪರಿವೀಕ್ಷಣೆಯ ಪರೀಕ್ಷಾರ್ಥವಾಗಿ 12 ದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮನ್ವಯ ಜಾಗತಿಕ ದತ್ತಾಂಶ ಅಧ್ಯಯನದ ಪ್ರಕಾರ, "ಭಾರತದಲ್ಲಿನ ರೋಗಿಗಳ ಪೈಕಿ ಶೇ. 32 ಮಂದಿ ಪದೇ ಪದೇ ಸಕ್ಕರೆಭರಿತ ಆಹಾರ ಸೇವನೆ ಮಾಡುತ್ತಾರೆ" ಎಂದು ತಿಳಿದು ಬಂದಿದೆ. ಬಾಯಿ ಆರೋಗ್ಯ ಪರಿವೀಕ್ಷಣೆಯನ್ನು ಒಂದು ದಶಲಕ್ಷ ದಂತ ವೈದ್ಯರನ್ನು ಒಳಗೊಂಡಿರುವ ವಿದೇಶಿ ದಂತವಿಜ್ಞಾನ ಸಂಸ್ಥೆಯಾದ ಜಾಗತಿಕ ದಂತ ವೈದ್ಯಕೀಯ ಒಕ್ಕೂಟ ರಚಿಸಿದೆ.

ಚೀನಾ ಹಾಗೂ ಭಾರತದಲ್ಲಿನ ರೋಗಿಗಳು ಉಪಾಹಾರಕ್ಕೂ ಮುನ್ನವೇ ಹಲ್ಲುಜ್ಜಿದರೆ, ಕೊಲೊಂಬಿಯಾ, ಇಟಲಿ ಹಾಗೂ ಜಪಾನ್‌ನಲ್ಲಿ ಆಹಾರ ಸೇವನೆಯ ನಂತರ ಬಹುತೇಕರು ಹಲ್ಲುಜ್ಜುತ್ತಾರೆ. ಚೀನಾದಲ್ಲಿನ ಶೇ. 11ರಷ್ಟು ರೋಗಿಗಳಿಗೆ ಹೋಲಿಸಿದರೆ ಭಾರತದಲ್ಲಿ ಶೇ. 32ರಷ್ಟು ರೋಗಿಗಳು ಪದೇ ಪದೇ ಸಕ್ಕರೆಭರಿತ ಆಹಾರ ಸೇವನೆ ಮಾಡುತ್ತಾರೆ ಎಂಬ ಸಂಗತಿ ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ದಂತ ವೈದ್ಯಕೀಯ ವಾರ್ತಾಪತ್ರದಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯ ಪ್ರಕಾರ, ಚೀನಾ ಹಾಗೂ ಭಾರತದಲ್ಲಿನ ಬಹುತೇಕರು ಒಂದು ಬಾರಿಯೂ ದಂತ ವೈದ್ಯರನ್ನು ಭೇಟಿಯಾಗಿಲ್ಲ ಎಂದು ಹೇಳಲಾಗಿದೆ. "ಎಲ್ಲ ದೇಶಗಳಲ್ಲೂ ಕಳೆದ ವರ್ಷ ಬಹುತೇಕ ರೋಗಿಗಳು ದಂತ ವೈದ್ಯರನ್ನು ಭೇಟಿಯಾಗಿದ್ದು, ಭಾರತದಲ್ಲಿ ಈ ಪ್ರಮಾಣ ಶೇ. 51ರಷ್ಟಿದ್ದರೆ, ಜಪಾನ್‌ನಲ್ಲಿ ಶೇ. 80ರಷ್ಟಿದೆ" ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ಪ್ರಾರಂಭಗೊಳ್ಳುವುದಕ್ಕೂ ಮುನ್ನ ಸಂಗ್ರಹಿಸಲಾಗಿರುವ ದತ್ತಾಂಶಗಳ ಪೈಕಿ ಭಾರತ, ಚೀನಾ, ಕೊಲೊಂಬಿಯಾ, ಇಟಲಿ, ಜಪಾನ್ ಹಾಗೂ ಲೆಬನಾನ್ ಸೇರಿದಂತೆ ಆರು ದೇಶಗಳ ದತ್ತಾಂಶ ಲಭ್ಯವಿದೆ. ಈ ಅಧ್ಯಯನದಲ್ಲಿ ರಾಷ್ಟ್ರೀಯ ದಂತ ವೈದ್ಯಕೀಯ ಒಕ್ಕೂಟವು ರೋಗಿಗಳ ಸಮೀಕ್ಷೆಗಾಗಿ ದಂತ ವೈದ್ಯರನ್ನು ನಿಯೋಜಿಸಿತ್ತು. ಈ ದಂತ ವೈದ್ಯರು ರೋಗಿಗಳ ವಾಸ ಸ್ಥಳ, ದಂತ ಚಿಕಿತ್ಸೆಯ ಹಾಜರಾತಿ, ಬಾಯಿ ಆರೋಗ್ಯ ನಡವಳಿಕೆಗಳು ಹಾಗೂ ಮೊಬೈಲ್ ತಂತ್ರಾಂಶ ಬಳಸಿ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅವರನ್ನು ಪ್ರಶ್ನಿಸಿದ್ದರು.

Similar News