ಪಾಕಿಸ್ತಾನದಲ್ಲಿ ಆಹಾರ ಅಭದ್ರತೆ ಉಲ್ಬಣದ ಸಾಧ್ಯತೆ: ವಿಶ್ವಸಂಸ್ಥೆ ವರದಿ ಎಚ್ಚರಿಕೆ

Update: 2023-05-31 17:05 GMT

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ತಲೆದೋರಿರುವ ರಾಜಕೀಯ ಮತ್ತು ಆರ್ಥಿಕ ಪ್ರಕ್ಷುಬ್ಧತೆ ತೀವ್ರಗೊಂಡರೆ ಮುಂದಿನ ದಿನಗಳಲ್ಲಿ ತೀವ್ರ ಆಹಾರ ಅಭದ್ರತೆ ಮತ್ತಷ್ಟು ಹೆಚ್ಚಬಹುದು ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಕೆ ನೀಡಿದೆ.

2023ರ ಜೂನ್ ನಿಂದ ನವೆಂಬರ್ ವರೆಗಿನ ಅವಧಿಗೆ ಸಂಬಂಧಿಸಿದ ಮುನ್ಸೂಚನೆಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (FAO) ಮತ್ತು ವಿಶ್ವ ಆಹಾರ ಕಾರ್ಯಕ್ರಮ(WFP) ಜಂಟಿಯಾಗಿ ಸಿದ್ಧಪಡಿಸಿದ `ಹಂಗರ್ ಹಾಟ್ಸ್ಪಾಟ್: ಎಫ್ಎಒ-ಡಬ್ಲ್ಯೂಎಫ್ಪಿ  ಅರ್ಲಿ ವಾರ್ನಿಂಗ್ಸ್ ಆನ್ ಸೀವಿಯರ್ ಫುಡ್ ಇನ್ಸೆಕ್ಯುರಿಟಿ' ಎಂಬ ಶೀರ್ಷಿಕೆಯ ವರದಿಯಲ್ಲಿ ಪ್ರಸ್ತುತಪಡಿಸಲಾಗಿದೆ.

ಪ್ರಸ್ತುತ ಜಾಗತಿಕ ಆರ್ಥಿಕ ಕುಸಿತದ ಮಧ್ಯೆ, ದೇಶದ ಸಾಲದ ಪ್ರಮಾಣ ಹೆಚ್ಚುತ್ತಿರುವುದು ಪಾಕಿಸ್ತಾನದ ಸುದೀರ್ಘ ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ. 2023ರ ಎಪ್ರಿಲ್ ನಿಂದ  2026ರ ಜೂನ್ ನ ನಡುವೆ ಸರಕಾರ 77.5 ಶತಕೋಟಿ ಡಾಲರ್ ನಷ್ಟು ಬಾಹ್ಯ ಸಾಲವನ್ನು ಮರುಪಾವತಿಸಬೇಕಿದೆ. 2021ರಲ್ಲಿ ಪಾಕಿಸ್ತಾನದ ಜಿಡಿಪಿ 350 ಶತಕೋಟಿ ಡಾಲರ್ ನಷ್ಟು ಇತ್ತು ಎಂಬುದನ್ನು ಗಮನಿಸಿದರೆ ಇದು ಭಾರೀ ಮೊತ್ತವಾಗಿದೆ. ಜತೆಗೆ, ರಾಜಕೀಯ ಅಸ್ಥಿರತೆ ಹೆಚ್ಚಳ,  ಸುಧಾರಣೆಗಳ ಸ್ಥಗಿತವು ಐಎಂಎಫ್ ನ ಸಾಲ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.

ದೇಶದ ವಾಯವ್ಯದಲ್ಲಿ ಅಸ್ಥಿರತೆ ಹೆಚ್ಚುತ್ತಿರುವುದರಿಂದ ನಾಗರಿಕ ಅಶಾಂತಿ ಮತ್ತು ರಾಜಕೀಯ ಬಿಕ್ಕಟ್ಟು  2023ರ ಅಕ್ಟೋಬರ್ ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ವಿದೇಶಿ ವಿನಿಮಯ ದಾಸ್ತಾನಿನ ಕೊರತೆ, ಕರೆನ್ಸಿಯ ಮೌಲ್ಯ ಕುಸಿಯುತ್ತಿರುವುದು ಅಗತ್ಯದ ಆಹಾರವಸ್ತು ಹಾಗೂ ಇಂಧನಗಳ ಆಮದು ಮತ್ತು  ಪೂರೈಕೆಯ ಸಾಮಥ್ರ್ಯವನ್ನು ಸೀಮಿತಗೊಳಿಸಿದೆ.

ಇದು ಆಹಾರ ವಸ್ತುಗಳ ಬೆಲೆಯೇರಿಕೆ ಹಾಗೂ ದೇಶದಾದ್ಯಂತ ವಿದ್ಯುತ್ ಕಡಿತಕ್ಕೆ ದಾರಿ ಮಾಡಿಕೊಟ್ಟಿದೆ. ಕಳೆದ ವರ್ಷದ ಪ್ರವಾಹವು ಗಾಯದ ಮೇಲೆ ಬರೆಎಳೆದಂತಾಗಿದ್ದು , ದೇಶದ ಕೃಷಿ ವಲಯ ಹಾಗೂ ಅರ್ಥವ್ಯವಸ್ಥೆಗೆ 30 ಶತಕೋಟಿ ಪಾಕ್ ರೂಪಾಯಿಯಷ್ಟು ನಷ್ಟ ಉಂಟುಮಾಡಿದೆ. ದೇಶದ 8.5 ದಶಲಕ್ಷಕ್ಕೂ ಅಧಿಕ ಜನತೆಗೆ ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯ ಸಮಸ್ಯೆ ಎದುರಾಗಲಿದ್ದು ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಕುಟುಂಬದ ಖರೀದಿ ಶಕ್ತಿಯನ್ನು ಕುಂಟಿತಗೊಳಿಸುವ ಜತೆಗೆ, ಆಹಾರ ಮತ್ತು ಇತರ ಪ್ರಮುಖ ಉತ್ಪನ್ನಗಳ ಖರೀದಿಯ ಸಾಮಥ್ರ್ಯವನ್ನೂ ಕಡಿಮೆಗೊಳಿಸಲಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನವು ಅಫ್ಘಾನಿಸ್ತಾನದ ಪ್ರಮುಖ ವ್ಯಾಪಾರ ಸಹಭಾಗಿ ದೇಶವಾಗಿರುವುದರಿಂದ ಪಾಕಿಸ್ತಾನದ ರಾಜಕೀಯ ಮತ್ತು ಆರ್ಥಿಕ ಪ್ರಕ್ಷುಬ್ಧತೆ ಹಾಗೂ ಗಡಿಭಾಗದಲ್ಲಿನ ಭದ್ರತಾ ಸ್ಥಿತಿ ಮತ್ತಷ್ಟು ಹದಗೆಟ್ಟರೆ ಅಫ್ಘಾನ್ ನ ಕಲ್ಲಿದ್ದಲು ಮತ್ತು ಆಹಾರ ಧಾನ್ಯ ರಫ್ತು ಆದಾಯವೂ ಕಡಿಮೆಗೊಳ್ಳಲಿದೆ ಎಂದು ವರದಿ ಎಚ್ಚರಿಸಿದೆ.

ವಿಪತ್ತು ನಿರ್ವಹಣೆ ಮತ್ತು ವಲಯವಾರು ತುರ್ತುನಿರ್ವಹಣೆ ಯೋಜನೆಗಳಲ್ಲಿ ಮುನ್ಸೂಚನೆ ಆಧಾರಿತ ವಿತ್ತ ಮತ್ತು ಅಪಾಯ ವಿಮೆಯನ್ನು ಸೇರಿಸಲು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಪತ್ತು ನಿರ್ವಹಣಾ ಏಜೆನ್ಸಿಗಳ ಸಾಮಥ್ರ್ಯಗಳನ್ನು ಬಲಪಡಿಸುವಂತೆ ಕರೆ ನೀಡಿದೆ.

ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳ ಮೂಲಕ ಪರಿಣಾಮಕಾರಿ ತಡೆಗಟ್ಟುವ ಕ್ರಮ ಮತ್ತು ಮಾನವೀಯ ಪ್ರತಿಕ್ರಿಯೆಯನ್ನು ಉತ್ತೇಜಿಸಲು ಅಸ್ತಿತ್ವದಲ್ಲಿರುವ  ಸಾಮಾಜಿಕ ಸಂರಕ್ಷಣಾ ಕಾರ್ಯವಿಧಾನಗಳ ಪ್ರತಿಕ್ರಿಯಾತ್ಮಕ ಗುಣಗಳನ್ನು ಹೆಚ್ಚಿಸುವಂತೆ ವರದಿ ಶಿಫಾರಸು ಮಾಡಿದೆ.

2023ರ ಜೂನ್ ನಿಂದ ನವೆಂಬರ್ ವರೆಗಿನ ಮುನ್ಸೂಚನೆಯ ಅವಧಿಯಲ್ಲಿ 22 ದೇಶಗಳಲ್ಲಿ ವ್ಯಾಪಿಸಿರುವ 81 ಹಸಿವಿನ `ಹಾಟ್ಸ್ಪಾಟ್'ಗಳಲ್ಲಿ ತೀವ್ರ ಆಹಾರ ಅಭದ್ರತೆ ಮತ್ತಷ್ಟು ಹದಗೆಡಲಿದೆ. ಪಾಕಿಸ್ತಾನ, ಮಧ್ಯ ಆಫ್ರಿಕಾದ ಗಣರಾಜ್ಯ, ಇಥಿಯೋಪಿಯಾ, ಕೆನ್ಯಾ, ಕಾಂಗೊ ಮತ್ತು ಸಿರಿಯಾಗಳು ಅಧಿಕ ಅಪಾಯದ ಪ್ರದೇಶಗಳಾಗಿದ್ದು ತಕ್ಷಣದ ಗಮನಕ್ಕೆ ಅರ್ಹವಾಗಿವೆ ಎಂದು ವರದಿ ಎಚ್ಚರಿಸಿದೆ.

Similar News