ಮಾಧ್ಯಮದವರ ಸಮಸ್ಯೆಗಳಿಗೆ ಸ್ಪಂದನೆ: ಕೆ.ವಿ.ಪ್ರಭಾಕರ್

Update: 2023-06-01 16:52 GMT

ಬೆಂಗಳೂರು, ಜೂ.1: ಮಾಧ್ಯಮದವರ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಕುರುಬರ ಸಂಘದಲ್ಲಿ ಹಿಂದುಳಿದ ವರ್ಗಗಳ ಸಂಪಾದಕರ ಹಾಗೂ ವರದಿಗಾರರ ಸಂಘ ಮತ್ತು ಕುರುಬರ ಸಂಘ ಜಂಟಿಯಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಾಮಾನ್ಯ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸಿ ಸಣ್ಣ ಪತ್ರಿಕೆಗಳ ಮತ್ತು ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಖುದ್ದಾಗಿ ಅರಿತಿದ್ದೇನೆ ಮತ್ತು ಅನುಭವಿಸಿದ್ದೇನೆ. ಪತ್ರಿಕೆ ಮತ್ತು ಪತ್ರಕರ್ತರ ಯಾವುದೇ ಸಮಸ್ಯೆಗಳಿಗೆ ಸದಾ ಬೆಂಬಲವಾಗಿರುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಪತ್ರಿಕೆಗಳು ಮತ್ತು ಪತ್ರಕರ್ತರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಪತ್ರಿಕರ್ತರ ಮತ್ತು ಪತ್ರಿಕೆಗಳ ಸಮಸ್ಯೆಗೆ ಸ್ಪಂದಿಸಿ ಮೀಡಿಯಾ ಕಿಟ್, ಜಾಹೀರಾತು ನೀತಿ ಹಾಗೂ ಹಿಂದುಳಿದ ವರ್ಗಗಳ ಪತ್ರಿಕೆಗೆ ವಿಶೇಷ ಜಾಹೀರಾತು ನೀಡುವುದನ್ನು ಆರಂಭಿಸಿದ್ದರು. ಮುಂಬರುವ ದಿನಗಳಲ್ಲಿ ಸಹ ಎಲ್ಲ ಪತ್ರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ನಾನೊಬ್ಬ ಪತ್ರಕರ್ತನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕೆ.ವಿ.ಪ್ರಭಾಕರ್ ಅವರಿಗೆ ದೊರೆತ ಉನ್ನತ ಹುದ್ದೆ ಇಡೀ ಪತ್ರಿಕಾ ಸಮೂಹಕ್ಕೆ ದೊರೆತ ಗೌರವವಾಗಿದೆ. ಸರಕಾರಕ್ಕೆ ಮತ್ತು ಪತ್ರಕರ್ತರಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುವ ಪ್ರಾಮಾಣಿಕತೆ ಪ್ರಭಾಕರ್ ಬಳಿ ಇದೆ ಎಂದರು.

ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಪತ್ರಕರ್ತರ ಪ್ರತಿನಿಧಿಯಾಗಿ ಪ್ರಭಾಕರ್ ಸರಕಾರದಲ್ಲಿ ಭಾಗಿಯಾಗಿದ್ದಾರೆ. ಪತ್ರಕರ್ತರ ಪಿಂಚಣಿ ಮತ್ತು ಇನ್ನಿತರ ಸಮಸ್ಯೆಗಳು ಎದುರಿಸುತ್ತಿದ್ದು, ಸಂಕಷ್ಟದಲ್ಲಿರುವ ಪತ್ರಕ್ತರಿಗೆ ಮತ್ತು ಸಣ್ಣ ಹಾಗೂ ಮಧ್ಯಮವರ್ಗದ ಪತ್ರಿಕೆಗಳಿಗೆ ಸಹಾಯಕವಾಗುವ ರೀತಿಯಲ್ಲಿ ಪ್ರಭಾಕರ್ ನೆರವಾಗಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತ ಗಂಗಾಧರ ಮೊದಲಿಯಾರ್, ಹಿಂ.ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಅರಸ್, ಪತ್ರಿಕೆ ಸಂಪಾದಕರು ಮತ್ತು ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು, ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷ ನೀಲಕಂಠ ಸೇರಿ ಹಲವರು ಭಾಗವಹಿಸಿದ್ದರು.

Similar News