ಕೆಐಎಡಿಬಿ | ಭೂವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಆದ್ಯತೆ: ಸಚಿವ ಎಂ.ಬಿ.ಪಾಟೀಲ್

Update: 2023-06-01 17:56 GMT

ಬೆಂಗಳೂರು, ಜೂ.1: ಭಾರೀ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ವ್ಯಾಪ್ತಿಯ ಕೆಐಎಡಿಬಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತ ಇತ್ಯರ್ಥಪಡಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ. ಈ ಸಂಬಂಧ ಅಧಿಕಾರಿಗಳು ಇನ್ನು ಒಂದು ವಾರದಲ್ಲಿ ತಮಗೆ ಸರಿಯಾದ ಅಂಕಿಅಂಶ ಮತ್ತಿತರ ವಿವರಗಳನ್ನು ಒದಗಿಸಬೇಕು ಎಂದು ಇಲಾಖೆಯ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಾಧಿಕಾರ, ನಿಗಮ ಮತ್ತು ಮಂಡಳಿಗಳ ಅಧಿಕಾರಿಗಳೊಂದಿಗೆ ಗುರುವಾರ ಸುದೀರ್ಘ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಈ ಸೂಚನೆ ನೀಡಿದ್ದಾರೆ. 

ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಎಷ್ಟು ಕೈಗಾರಿಕಾ ನಿವೇಶನಗಳನ್ನು ಹೇಗೆ? ಯಾರಿಗೆ ಹಂಚಲಾಗಿದೆ ಮತ್ತು ಅವು ಯಾವ ಸ್ಥಿತಿಗತಿಯಲ್ಲಿವೆ ಎನ್ನುವ ವರದಿ ಸಿದ್ಧವಾಗಬೇಕು. ಇದರ ಆಧಾರದ ಮೇಲೆ ಕ್ಷಿಪ್ರ ಕ್ರಮ ಕೈಗೊಳ್ಳಲಾಗುವುದು ಎಂದರು. 

ರಾಜ್ಯದಲ್ಲಿ ಕೇವಲ ಟಿಡಿಎಸ್ ಮೂಲಕವೇ ವರ್ಷಕ್ಕೆ 1.20 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಒಟ್ಟಿನಲ್ಲಿ ಪಾರದರ್ಶಕ ರೀತಿಯಲ್ಲಿ ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಒತ್ತು ಕೊಡಲಾಗುವುದು. ಇದನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಎಚ್ಚರಿಸಿದರು.

"ಭೂಸ್ವಾಧೀನಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಕಾನೂನು ವಿಭಾಗದ ಅಧಿಕಾರಿಗಳು ಸರಿಯಾಗಿ ಪ್ರತಿನಿಧಿಸದೆ, ಪ್ರತಿವಾದಿಗಳ ಜತೆ ಶಾಮೀಲಾಗುತ್ತಿರುವ ವರದಿಗಳಿವೆ. ನೂತನ ಸರಕಾರ ಇದನ್ನು ಎಳ್ಳಷ್ಟೂ ಸಹಿಸುವುದಿಲ್ಲ. ನಾನು ನೋಡಲು ಮೃದು ಸ್ವಭಾವದ ವ್ಯಕ್ತಿಯಾಗಿದ್ದೇನೆ. ಆದರೆ ರಾಜ್ಯದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ. ಕೇವಲ ಲಾಬಿ ಮಾಡಿಕೊಂಡು ಓಡಾಡುವ ಅಧಿಕಾರಿಗಳ ವಿರುದ್ಧ ಚಾಟಿ ಬೀಸುವುದು ನಿಶ್ಚಿತ ಎಂದು ಸಚಿವರು ಖಡಕ್ಕಾಗಿ ಎಚ್ಚರಿಸಿದರು.

ಸಭೆಯಲ್ಲಿ ಉದ್ಯಮೆಗಳ ಮುಖ್ಯಸ್ಥರು ಹಾಗೂ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ಗುಂಜನ್ ಕೃಷ್ಣ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.

Similar News