ಮಾಣಿ: ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Update: 2023-06-02 04:48 GMT

ಬಂಟ್ವಾಳ: ಮಾಣಿಯ  ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಪೆರಾಜೆ ಗ್ರಾಮದ ವಿದ್ಯಾನಗರದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಶಾಲಾ ಪ್ರಾರಂಭೋತ್ಸವ ಗುರುವಾರ ನಡೆಯಿತು.

ಮಾಣಿಯ ಹಳೆಯ ಶಾಲೆಯಲ್ಲಿ ಒಟ್ಟು ಸೇರಿದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಪೆರಾಜೆ ಗ್ರಾಮದ ವಿದ್ಯಾನಗರದ ನೂತನ ಶಾಲೆಯ ತನಕ ವೈಭವದ ಮೆರವಣಿಗೆಯ ಮೂಲಕ ತೆರಳಿದರು.
 
ಶಾಲಾ ಸಭಾ ಭವನದ ದಿ.ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮಂಗಳೂರು ಶಕ್ತಿ ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ.ಕೆ.ಸಿ.ನಾಯ್ಕ್ ಮಾತನಾಡಿ,   ಶಿಕ್ಷಣ ಸಂಸ್ಥೆಗಳು ಬೆಳವಣಿಗೆ ಯಾದಾಗ ಶೈಕ್ಷಣಿಕ ಪ್ರಗತಿಯಾ ಗುತ್ತದೆ. ಇದು ಅಭಿನಂದನೀಯ ಕಾರ್ಯ, ಮಕ್ಕಳು ದೇಶದ ಸಂಪತ್ತಾಗಿ ಬೆಳೆಯಲಿ ಎಂದರು.

 ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ತಿನ್ಸಿಪಾಲ್ ಗೋಪೀನಾಥ್ ಶೆಟ್ಟಿ ಎಂ. ಅವರು ಮಾತನಾಡಿ, ಹಳ್ಳಿಯಲ್ಲಿ ವಿವಿಧ ಸೌಲಭ್ಯ ಹಾಗೂ ಅದ್ಧೂರಿತನವನ್ನು ಮೈಗೂಡಿಸಿ ಕೊಂಡು ಉತ್ತಮ ಒಳಾಂಗಣ ವ್ಯವಸ್ಥೆಯನ್ನು ಹೊಂದಿರುವ ಕಟ್ಟಡದಲ್ಲಿ ಇಂದು ವಿದ್ಯಾಭ್ಯಾಸ ಮಾಡುತ್ತಿರುವುದು ಶ್ಲಾಘನೀಯ.  ಹಿಂದಿನದ್ದನ್ನು ನಾವು ಮರೆಯಬಾರದು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲೆ ಶೈಕ್ಷಣಿಕವಾಗಿ ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಣಿ ಬಾಲವಿಕಾಸ ಟ್ರಸ್ಟ್ ಅದ್ಯಕ್ಷ ಪ್ರಹ್ಲಾದ್ ಶೆಟ್ಟಿ  ಮಾತನಾಡಿ ಮಕ್ಕಳಿಗೆ ವಿದ್ಯೆಯೇ ಆಸ್ತಿ, ಅವರನ್ನು ಸತ್ಪ್ರಜೆಗಳನ್ನಾಗಿಸುವುದು ನಮ್ಮ ಧ್ಯೇಯ ಎಂದರು.

ಮಾಣಿ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಪೆರಾಜೆ ಗ್ರಾ.ಪಂ.ಉಪಾದ್ಯಕ್ಷ ಉಮ್ಮರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ, ಬಾಲ ವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಸದಸ್ಯರಾದ ಯತಿರಾಜ್, ಸುಭಾಷಿಣಿ ಶೆಟ್ಟಿ ಉಪಸ್ಥಿತರಿದ್ದರು. 

ಇದೇ ವೇಳೆ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದ ತಂಡದ ಸದಸ್ಯರಿಗೆ, ಮತದಾನ ಜಾಗೃತಿ ಮೂಡಿಸಿದ ಸನ್ನಿಧಿ, ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸ್ಥಾನ ಪಡೆದ ಮಹಮ್ಮದ್ ಅಜ್ಮಲ್, ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಜ್ಞಾನ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಆಡಳಿತಾಧಿಕಾರಿ ರವೀಂದ್ರ ದರ್ಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ.ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಶೋಭಾ ಎಂ.ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಜಯಶ್ರೀ ಆಚಾರ್ಯ ಮತ್ತು ಸುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.

Similar News