ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ವ್ಯವಸ್ಥೆ: ಪುತ್ತೂರು ಶಾಸಕ ಅಶೋಕ್ ರೈ

ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಪ್ರಾಯೋಜಿತ ಉಪನ್ಯಾಸ

Update: 2023-06-02 16:19 GMT

ಪುತ್ತೂರು : ಸರ್ಕಾರಿ ಶಾಲೆಗಳಲ್ಲಿ ಕೆಲವೊಂದು ಕೊರತೆಗಳಿರುವುದು ಸಹಜ. ಆದರೆ ಮುಂದಿನ ಎರಡು-ಮೂರು ವರ್ಷಗಳಲ್ಲಿ ಎಲ್ಲಾ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇರುವ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಅಶೋಕ್‍ಕುಮಾರ್ ರೈ ಹೇಳಿದರು. 

ಅವರು ಪುತ್ತೂರು ತಾಲೂಕಿನ ಕೆಯ್ಯೂರಿನ ಕೆಪಿಎಸ್ ಸ್ಕೂಲ್‍ನಲ್ಲಿ ಬುಧವಾರ ನಡೆದ ತಾಲೂಕು ಪ್ರೌಢ ಶಾಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಮತ್ತು ದ,ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ 19ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಪ್ರಾಯೋಜಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಒಂದಿಷ್ಟು ಬೇಡಿಕೆಗಳಿರುವುದು, ಕಟ್ಟಡ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆಗಳಿರುವುದು ಗಮನಕ್ಕೆ ಬಂದಿದ್ದು, ಈ ವಿಚಾರವನ್ನು ಶಿಕ್ಷಣ ಸಚಿವ ಗಮನಕ್ಕೆ ತರಲಾಗಿದೆ. ಶಿಕ್ಷಕರ ಕೊರತೆ ಎಲ್ಲಾ ಶಾಲೆಗಳಲ್ಲಿ ಇದ್ದು, ಈ ಬಾರಿ ಶೇ.95ರಷ್ಟು ಶಿಕ್ಷಕರ ಕೊರತೆ ನೀಗಿಸುವ ಕೆಲಸ ಆಗಿದೆ. 130 ಪರ್ಮನೆಂಟ್ ಶಿಕ್ಷಕರ ಜತೆಗೆ ಗೌರವ ಶಿಕ್ಷಕರನ್ನು ಕೊಡುವ ಕೆಲಸ ಆಗಿದೆ. ಸೈಕಲ್ ಯೋಜನೆಯೊಂದನ್ನು ಹೊರತು ಪಡಿಸಿ ಹಾಲು, ಮೊಟ್ಟೆ, ಪಠ್ಯಪುಸ್ತಕ, ಸಮವಸ್ತ್ರವನ್ನು ಎಲ್ಲಾ ಶಾಲೆಗಳಿಗೆ ತಲುಪಿಸಲಾಗಿದೆ. ವ್ಯವಸ್ಥೆಗಳನ್ನು ಒಂದು ತಿಂಗಳ ಮುಂಚಿತವಾಗಿಯೇ ಮುಟ್ಟಿಸುವ ಕೆಲಸ ಈ ಬಾರಿ ಆಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಶಾಲೆಗಳು ಕಡೆಗಣನೆಗೆ ಗುರಿಯಾಗಿರುವುದನ್ನು ನಾವು ಕಂಡಿದ್ದೇವೆ. ನಾನೂ ಸರ್ಕಾರಿ ಶಾಲೆಯಲ್ಲೇ ಓದಿದವನಾಗಿದ್ದು, ತಮ್ಮ ಮಕ್ಕಳ ಭವಿಷ್ಯ ಒಳ್ಳೆಯದಾಗಬೇಕೆಂದು ಹೆತ್ತವರು ಬಯಸುವುದು ಸಹಜ. ಆದರೆ ಈಗ ಸರ್ಕಾರಿ ಶಾಲೆಗಳಲ್ಲಿ ತುಂಬಾ ಬದಲಾವಣೆಗಳಾಗಿದ್ದು, ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಲಭಿಸುತ್ತಿದೆ ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ಪುತ್ತೂರು ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ವಿವೇಕಾನಂದ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಶೋಭಿತಾ ಸತೀಶ್ ಅವರು `ಶಿಕ್ಷಣದಲ್ಲಿ ಸಾಹಿತ್ಯ ಮತ್ತು ಸಂಗೀತದ ಪಾತ್ರ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

19ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎ.ಕೆ.ಜಯರಾಮ ರೈ, 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷ ದಂಬೆಕಾನ ಸದಾಶಿವ ರೈ,ದ.ಕ.ಜಿಲ್ಲಾ ಭಾರತ್ ಸೇವಾ ದಳದ ಜಿಲ್ಲಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳೆಜ್ಜ,ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್,ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ ಮತ್ತು ಜಯಂತ ಪೂಜಾರಿ ಕೆಂಗುಡೇಲು ಮುಖ್ಯ ಅತಿಥಿಗಳಾಗಿದ್ದರು.

ಕೆಯ್ಯೂರು ಕೆಪಿಎಸ್‍ನ ಪ್ರಾಂಶುಪಾಲ ಇಸ್ಮಾಯಿಲ್ ಪಿ, ಮುಖ್ಯ ಶಿಕ್ಷಕ ಬಾಬು ಎಂ, ಸ್ಕೂಲ್‍ನ ಉಪ ಪ್ರಾಂಶುಪಾಲ ಕೆ.ಎಸ್.ವಿನೋದ್‍ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ನಳಿನಿ ವಂದಿಸಿದರು. ಶಿಕ್ಷಕಿ ಜೆಸ್ಸಿ ಪಿ.ವಿ ಕಾರ್ಯಕ್ರಮ ನಿರೂಪಿಸಿದರು.  

Similar News