ಕಾಂಗ್ರೆಸ್‍ನಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ: ಬಸವರಾಜ ಬೊಮ್ಮಾಯಿ

Update: 2023-06-02 16:33 GMT

ಬೆಂಗಳೂರು, ಜೂ.2: ‘ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ಮಾತಿಗೆ ತಪ್ಪಿರುವ ಕಾಂಗ್ರೆಸ್‍ನ ನಿಜ ಬಣ್ಣ ಬಯಲಾಗಿದ್ದು, ಗ್ಯಾರೆಂಟಿ ಯೋಜನೆ ಜಾರಿ ಮಾಡಲು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. 

ಶುಕ್ರವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸರಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು ಭರವಸೆ ತೋರಿಸಿತ್ತು. ಆದರೆ, ಜನರ ನಿರೀಕ್ಷೆಗಳನ್ನು ದೊಡ್ಡ ಮಟ್ಟದಲ್ಲಿರಿಸಿಕೊಂಡು ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ, ಚುನಾವಣೆ ಪೂರ್ವ ಮಾತಿಗೂ ಚುನಾವಣೆ ನಂತರದ ಮಾತಿಗೂ ಬಹಳ ವ್ಯತ್ಯಾಸ ಇದೆ. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಅಂತ ಹೇಳಿದ್ದಾರೆ. ಗ್ಯಾರೆಂಟಿ ಕಾರ್ಡ್‍ನಲ್ಲಿಯೂ ಅದೇ ರೀತಿ ಹೇಳಿದ್ದಾರೆ ಎಂದರು.

ಒಂದು ಮನೆಯಲ್ಲಿ 70 ಯೂನಿಟ್ ಅಥವಾ 80 ಯೂನಿಟ್ ಬಳಕೆ ಮಾಡಬಹುದು. 200 ಯೂನಿಟ್ ಬಳಕೆ ಮಾಡಿದರೆ ಉಚಿತ ಕೊಡಬೇಕು. ಆದರೆ, ಇವತ್ತಿನ ಮುಖ್ಯಮಂತ್ರಿಯ ಮಾತಿನಲ್ಲಿ ವ್ಯತ್ಯಾಸ ಇದೆ. ಈಗ ಸಿಎಂ ವಾರ್ಷಿಕ ಸರಾಸರಿ ಲೆಕ್ಕ ಹಾಕಿ ಉಚಿತ ಕೊಡುವುದಾಗಿ ಹೇಳುತ್ತಾರೆ. ಇದು ಇವರ ಹಿಡನ್ ಅಜೆಂಡಾ ಆಗಿದೆ. ಇದರಿಂದ ಸರಾಸರಿ 120 ರಿಂದ 125 ಯೂನಿಟ್ ವ್ಯತ್ಯಾಸವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಅನ್ನಭಾಗ್ಯದಲ್ಲಿ ಹೆಚ್ಚುವರಿ ಐದು ಕೆ.ಜಿ ಮಾತ್ರ ಕೊಡುವುದು, ಕೇಂದ್ರ ಸರಕಾರ ಆಹಾರ ಭದ್ರತೆ ಕಾಯ್ದೆಯಡಿ 5 ಕೆ.ಜಿ ಅಕ್ಕಿ ಕೊಡುತ್ತಿದೆ. ನಮ್ಮ ರಾಜ್ಯದಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ಒಂದು ಕೆ.ಜಿ ರಾಗಿ ಒಂದು ಕೆ.ಜಿ ಜೋಳ ಕೊಡುತ್ತಿದ್ದೇವೆ. ಅದನ್ನು ಮುಂದುವರೆಸುತ್ತಾರೋ? ಇಲ್ಲವೋ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.

ಗೃಹ ಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಧೋಖಾ ಇದೆ. ಬಡವರ ಮನೆಯಲ್ಲಿ ಹಿರಿಯ ಮಹಿಳೆಯರಿರುತ್ತಾರೆ. ಅವರಿಗೆ ಆನ್ ಲೈನ್ ಅರ್ಜಿ ಹಾಕಲು ಹೇಳಿ ಅವರಿಗೆ ಯೋಜನೆ ಲಾಭ ಸಿಗದಂತೆ ಮಾಡುವ ಹುನ್ನಾರ ಅಡಗಿದೆ. ಅರ್ಜಿ ಹಾಕಲು ಒಂದು ತಿಂಗಳು, ಪ್ರಕ್ರಿಯೆ ಮಾಡಲು ಒಂದು ತಿಂಗಳು ಕಾಲ ಹರಣ ಮಾಡುವ ಲೆಕ್ಕ ಇದರಲ್ಲಿ ಅಡಗಿದೆ ಎಂದು ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಯುವ ನಿಧಿ ಯೋಜನೆಯನ್ನು 2022-23 ಪಾಸಾದ ಡಿಗ್ರಿ ಹೋಲ್ಡರ್ಸ್ ಗಳಿಗೆ ಕೊಡುವುದಾಗಿ ಹೇಳುತ್ತಾರೆ. ಡಿಗ್ರಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಹೀಗಾಗಿ ಹೆಚ್ಚಿನ ನಿರುದ್ಯೋಗಿಗಳಿಗೆ ಅನುಕೂಲ ಆಗುವುದಿಲ್ಲ. ಮತ್ತೆ ಈ ಯೋಜನೆಗಳ ಜಾರಿಗೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಹೇಳಿಲ್ಲ ಎಂದು ಅವರು ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ 6800 ಕೋಟಿ ರೂ.ಮೀಸಲಿಟ್ಟಿದ್ದೇವೆ. ಅದನ್ನು ಏನು ಮಾಡುತ್ತಾರೆ. ಯಾವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಾರೆ, ಎಲ್ಲಿಂದ ಹಣ ತರುತ್ತಾರೆ ಎನ್ನುವುದನ್ನು ತಿಳಿಸಿಲ್ಲ. ಸರಕಾರ ಹೆಚ್ಚಿನ ಆದಾಯ ತರದೆ ಇರುವ ಹಣವನ್ನೆ ಖರ್ಚು ಮಾಡಿದರೆ, ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

''ಪ್ರತಿಪಕ್ಷ ನಾಯಕ ಆಯ್ಕೆ ಗೊಂದಲ ಇಲ್ಲ''

‘ಪ್ರತಿಪಕ್ಷದ ನಾಯಕನ ಸ್ಥಾನ ಆಯ್ಕೆಯಲ್ಲಿ ಯಾವುದೆ ಗೊಂದಲ ಇಲ್ಲ. ಮುಂದಿನ ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಪಕ್ಷದ ನಾಯಕನ ಆಯ್ಕೆಯಾಗುತ್ತದೆ. ಇದಕ್ಕಾಗಿ ಯಾವುದೆ ಸ್ಪರ್ಧೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಒಟ್ಟಾಗಿ ತೀರ್ಮಾನ ಮಾಡುತ್ತೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

Similar News