ಸಾಗಾಟ ವೆಚ್ಚ ಕಡಿತದಿಂದ ರಫ್ತು ಉದ್ಯಮಕ್ಕೆ ಪ್ರೋತ್ಸಾಹ: ಡಾ. ವೆಂಕಟರಮಣ ಅಕ್ಕರಾಜು

ಸಮುದ್ರದ ಪ್ರತಿಕೂಲತೆ ಕುರಿತ ಕಾರ್ಯಾಗಾರ

Update: 2023-06-02 17:57 GMT

ಮಂಗಳೂರು : ದೇಶದಲ್ಲಿ ಗುಣಮಟ್ಟದ ಉತ್ಪನ್ನಗಳು ಸಿದ್ಧವಾದರೂ, ಸಾಗಾಟ ವೆಚ್ಚವನ್ನು ತಗ್ಗಿಸುವ ಸವಾಲು ಇದೆ. ಅದನ್ನು ಮೀರಲು ಶ್ರಮಿಸಬೇಕಿದೆ. ಈ ಪ್ರಯತ್ನದ ಮೂಲಕ ರಫ್ತು ಉದ್ಯಮಕ್ಕೆ ಪ್ರೋತ್ಸಾಹ ನೀಡಿ ದಂತೆಯೂ ಆಗುತ್ತದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಅಧ್ಯಕ್ಷ ಡಾ. ವೆಂಕಟರ ಮಣ ಅಕ್ಕರಾಜು ಅಭಿಪ್ರಾಯಪಟ್ಟರು.

ಮಂಗಳೂರು ಪ್ರಾಧಿಕಾರದಲ್ಲಿ ಶುಕ್ರವಾರ ನಡೆದ ‘ಸಮುದ್ರದ ಪ್ರತಿಕೂಲತೆ’ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆಮದು ಮತ್ತು ರಫ್ತು ನಡೆದಾಗ ಮಾತ್ರ ಬಂದರುಗಳು ಅಭಿವೃದ್ಧಿ ಕಾಣುತ್ತವೆ. ಸರಕುಗಳನ್ನು ಹೆಚ್ಚಿಸಿ ಸಾಗಾಟ ವೆಚ್ಚವನ್ನು ಕಡಿಮೆಗೊಳಿಸಲು ಸಾಧ್ಯವಿದೆ. ದೇಶೀಯ ವಸ್ತುಗಳ ರಫ್ತಿನಲ್ಲಿ ಸಾಗಾಟ ವೆಚ್ಚವನ್ನು ನಿಯಂತ್ರಣ ಮಾಡುವ ಮೂಲಕ ಚೀನಾ, ಪೆಸಿಫಿಕ್ ದೇಶಗಳ ಮುಂದೆ ಸ್ಪರ್ಧೆಯೊಡ್ಡಬಹುದಾಗಿದೆ. ಇದರಿಂದ ದೇಶದ ಜಿಡಿಪಿ ಅಭಿವೃದ್ಧಿ ಹೊಂದಿ, ಜನರ ತಲಾ ಆದಾಯದಲ್ಲಿ ಪ್ರಗತಿ ಕಾಣಬಹುದು ಎಂದು ಡಾ.ವೆಂಕಟರಮಣ ಅಕ್ಕರಾಜು ಹೇಳಿದರು.

ಬಂದರು ಅಭಿವೃದ್ಧಿಯ ಭಾಗವಾಗಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಅಂತರ ರಾಷ್ಟ್ರೀಯ ಕಾರ್ಗೊಗಳು ಬೇರೆ ದೇಶಗಳ ಮೂಲಕ ಹಾದು ಹೋಗುತ್ತಿದ್ದವು. ಈಗ ಭಾರತದ ಸಮುದ್ರ ದಡಕ್ಕೂ ಬರುತ್ತವೆ. ಇದು ಪೂರಕ ಬೆಳವಣಿಗೆಯಾಗಿದೆ. ಬಂದರುಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ ಎಂದು ಹೇಳಿದರು.

ಎನ್‌ಎಂಪಿಎ ಕೋಸ್ಟ್ ಗಾರ್ಡ್‌ನ ಡಿಐಜಿ ಪಿ.ಕೆ. ಮಿಶ್ರಾ, ಕೇಂದ್ರ ಸರಕಾರದ ಮಾಜಿ ನಾವಿಕ ಸಲಹೆಗಾರ ಕ್ಯಾಪ್ಟನ್ ಎಲ್.ಕೆ. ಪಾಂಡ, ಐಪಿಎ ಸಲಹೆಗಾರ ಡಾ. ಆರ್.ಡಿ. ತ್ರಿಪಾಠಿ, ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ.ನಾಥ್, ಅಧಿಕಾರಿ ಕ್ಯಾಪ್ಟನ್ ಎಸ್.ಆರ್. ಪಟ್ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Similar News