ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಆಡಳಿತ ನಿರ್ದೇಶಕ ಡಾ.ಮಹಾಬಲೇಶ್ವರಗೆ ಸನ್ಮಾನ

Update: 2023-06-04 15:52 GMT

ಮಂಗಳೂರು, ಜೂ.4: ಕರ್ನಾಟಕ ಬ್ಯಾಂಕ್ ಕೇವಲ ವಾಣಿಜ್ಯ ಬ್ಯಾಂಕ್ ಅಲ್ಲ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಆಂದೋಲನದ ಸಂಸ್ಥೆಯೂ ಆಗಿದೆ. ಕರ್ಣಾಟಕ ಬ್ಯಾಂಕ್‌ನ ಹಿಂದಿನ ಅಧಿಕಾರಿಗಳು ಹಾಗೂ ಜನತೆಯ ಆಶಯಕ್ಕೆ ಧಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ. 100 ವರ್ಷದ ಇತಿಹಾಸ ಹೊಂದಿರುವ ಈ ಬ್ಯಾಂಕ್‌ನಲ್ಲಿ ಆರು ವರ್ಷ ಎಂಡಿ ಹಾಗೂ ಸಿಇಒ ಆಗಿದ್ದೆ. ಆರಂಭದಿಂದ ಲಾಭದಲ್ಲೇ ಮುನ್ನಡೆಯುತ್ತಿದ್ದ ಬ್ಯಾಂಕ್ ಪ್ರಸ್ತುತ 1 ಸಾವಿರ ಕೋ.ರೂ.ಲಾಭ ಹೊಂದಿದೆ ಎಂದು ಡಾ. ಮಹಾಬಲೇಶ್ವರ ಎಂ.ಎಸ್. ಹೇಳಿದರು.

ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಮಹಾಬಲೇಶ್ವರ ಎಂ.ಎಸ್. ಅವರಿಗೆ ಡಾ. ಮಹಾಬಲೇಶ್ವರ ಎಂ.ಎಸ್. ಅಭಿನಂದನಾ ಸಮಿತಿಯ ವತಿ ಯಿಂದ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ರವಿವಾರ ನಡೆದ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾರದಾ ಸಮೂಹ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ‘ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಕಲಿತ ಡಾ.ಎಂ.ಎಸ್. ಮಹಾಬಲೇಶ್ವರ ಅವರು ಕರ್ಣಾಟಕ ಬ್ಯಾಂಕ್ ಎಂಡಿ ಹಾಗೂ ಸಿಇಒ ಆಗಿ ಬ್ಯಾಂಕನ್ನು ಉನ್ನತ ಸ್ಥಾನಕ್ಕೆ ಏರಿಸಿದ್ದಾರೆ. ಅವರು ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿ ಮೂಲಕ ಸಮಾಜ ಜೀವನದಲ್ಲಿ ಸಕ್ರಿಯರಾಗಿರ ಬೇಕು ಎಂದು ಆಶಿಸಿದರು.

ಶ್ರೀ ಶರವು ಕ್ಷೇತ್ರದ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಆಶೀರ್ವಚನ ನೀಡಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ರಾಘವೇಂದ್ರ ರಾವ್ ಸನ್ಮಾನ ಕಾರ್ಯ ನೆರವೇರಿಸಿದರು. ಈ ಸಂದರ್ಭ ಡಾ. ಮಹಾಬಲೇಶ್ವರ ಎಂ.ಎಸ್‌ರ ಪತ್ನಿ ಅನ್ನಪೂರ್ಣ ಅವರನ್ನೂ ಗೌರವಿಸಲಾಯಿತು.

ಅತಿಥಿಗಳಾಗಿ ಶಕ್ತಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ನಾಯ್ಕ್, ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನ ರೂರು, ಉದ್ಯಮಿಗಳಾದ ಬಿ. ಆರ್. ಸೋಮಯಾಜಿ, ಎಂ.ರವೀಂದ್ರ ಶೇಟ್, ಶ್ರೀ ಮಂಗಳಾದೇವಿ ದೇವಳದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ನಮ್ಮ ಕುಡ್ಲ ಬಳಗದ ಅಧ್ಯಕ್ಷ ಲೀಲಾಕ್ಷ ಕರ್ಕೇರ, ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿಯ ಅಧ್ಯಕ್ಷ ರಮಾನಂದ ಪಾಂಗಾಳ ಭಾಗವಹಿಸಿದ್ದರು.

ದ.ಕ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ವಾಸುದೇವ ರಾವ್ ವಂದಿಸಿದರು.

Similar News