ವಿಶ್ವ ಪರಿಸರ ದಿನಾಚರಣೆ: ಕುದ್ರುವಿನಲ್ಲಿ ಕಾಂಡ್ಲಾ ಸಸಿ ನಾಟಿ ಜಾಗೃತಿ ಕಾರ್ಯಕ್ರಮ

Update: 2023-06-05 09:35 GMT

ಮಂಗಳೂರು, ಜೂ.5; ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಡಲತೀರದಲ್ಲಿ ಕಾಂಡ್ಲಾವನದ ಮಹತ್ವ ಮತ್ತು ಉಪಯುಕ್ತತೆ ಕಾಂಡ್ಲಾ ಸಸಿ ನೆಡುವ ಮತ್ತು ಒಲವು ಮೂಡಿಸುವ  ಕಾರ್ಯಕ್ರಮವನ್ನು ಮಂಗಳೂರು ಪ್ಯಾರಡೈಸ್ ಐಲ್ಯಾಂಡ್ (ಕುದ್ರು)ನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್  ಕಾಂಡ್ಲಾ ಬೀಜ ಬಿತ್ತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ವೈ ಕಾಂಡ್ಲಾ ವನದ ಬಗ್ಗೆ ಮಾಹಿತಿ ನೀಡಿ,ಉಪ್ಪುಮಿಶ್ರಿತ ಕೆಸರು ನೀರಿನಲ್ಲಿ ಬೆಳೆಯುವ ಕಾಂಡ್ಲಾ ಸಸ್ಯ ಮಣ್ಣಿನ ಸವಕಳಿಯನ್ನು ತಡೆದು ಜಲಚರ ಜೀವಿಗಳ ಆಶ್ರಯ ತಾಣವಾಗಿದೆ. ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ನ್ನು ಹಿಡಿದಿಟ್ಟು ಕೊಂಡು ಆಮ್ಲಜನಕ ಒದಗಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕಾಂಡ್ಲಾ ವನ ನೀರಿನ ಅಲೆಗಳನ್ನು ತಡೆದ ಮೀನುಗಳ ಸಂತತಿ ವೃದ್ಧಿಗೆ ಕಾರಣವಾಗಿದೆ. ಸಸ್ಯ ದ ಬೇರುಗಳಿಗೆ ಅಂಟಿಕೊಂಡ ಪಾಚಿ ಮೀನು ಮರಿಗಳಿಗೆ ಆಹಾರವಾಗಿದೆ.ಸುನಾಮಿಯಂತಹ ಚಂಡಮಾರುತ ವನ್ನು ತಡೆದುಕೊಳ್ಳಬಲ್ಲ ಶಕ್ತಿ ಕಾಂಡ್ಲಾವನಗಳಿಗಿದೆ. ಈ ನಿಟ್ಟಿನಲ್ಲಿ ದೇಶದ ಕರಾವಳಿ 9 ಜಿಲ್ಲೆಗಳಲ್ಲಿ ಮತ್ತು 4 ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪ ತಡೆ ಮತ್ತು ಪರಿಸರ ಸಂರಕ್ಷಣೆ ಗಾಗಿ ಪ್ರಧಾನ ಮಂತ್ರಿ ವಿಶ್ವ ಪರಿಸರ ದಿನದಂದು (ಮಿಸ್ಟಿ)ಕಾರ್ಯಕ್ರಮಕ್ಕೆ ಈ ದಿನ ಚಾಲನೆ ನೀಡುತ್ತಿದ್ದಾರೆ ಎಂದು ದಿನೇಶ್ ಕುಮಾರ್ ತಿಳಿಸಿದ್ದಾರೆ.

 ಸಮಾರಂಭದಲ್ಲಿ ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್ , ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ದಿನೇಶ್ ಬಾಬು, ಮೀನುಗಾರಿಕಾ ಕಾಲೇಜು ಡೀನ್ ಶಿವಕುಮಾರ್ ಮಗಧ, ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಪಿ.ಶ್ರೀಧರ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮೊದಲಾದವರು ಉಪಸ್ಥಿತರಿದ್ದರು.

Similar News