ಉಳ್ಳಾಲ ಕಸಾಪದಿಂದ ಪರಿಸರ ಜಾಗೃತಿ ಕಾರ್ಯಾಗಾರ ಮತ್ತು ಸಾಹಿತ್ಯ ಸಂಭ್ರಮ

Update: 2023-06-05 14:44 GMT

ಕೊಣಾಜೆ: ಆಧುನಿಕತೆ ಮತ್ತು ಅಭಿವೃದ್ಧಿಯ ನಡುವೆ ನಾವು ಮುನ್ನಡೆಯುತ್ತಿದ್ದು, ಅದರ ಭಾಗವಾದ ಪ್ಕಾಸ್ಟಿಕ್ ಮತ್ತು ಈ- ವೇಸ್ಟ್ ಗಳ ನಿರ್ವಹಣೆಯೇ ಇಂದು ಜಗತ್ತಿನ ಅತಿದೊಡ್ಡ ಸಮಸ್ಯೆಯಾಗಿದೆ. ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಪ್ರಕೃತಿ ಸಂವೇದಿ ಮನಸ್ಥಿತಿ ಮತ್ತು ಕ್ರಿಯೆಗಳ ಮೂಲಕ ಎದುರಿಸಬೇಕಿದೆ. ವಿದ್ಯಾರ್ಥಿಗಳು ಪರಿಸರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞಾ ಬದ್ಧರಾಗಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ ಶ್ರೀಪಾದ ಕೆ ಎಸ್ ಹೇಳಿದರು.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಕೊಣಾಜೆ ಘಟಕ, ಪುಸಕುರಲ್ ಬಳಗ, ನಾಗಬ್ರಹ್ಮ ಪ್ರಗತಿಪರ ಸ್ವ ಸಹಾಯ ಸಂಘ, ಬ್ರಹ್ನಸನ್ನಿಧಿ ನಾಗ ಪರಿವಾರ ಕ್ಷೇತ್ರ ಸಮಿತಿ, ಸರಕಾರಿ ಪ್ರೌಢಶಾಲೆ ಕೊಣಾಜೆಪದವು ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವುಗಳ ಆಶ್ರಯದಲ್ಲಿ ಕೆಳಗಿನ ಮನೆ ತೋಟದ ಬ್ರಹ್ಮ ಸನ್ನಿಧಿ ನಾಗಪರಿವಾರ ಕ್ಷೇತ್ರದ ಆವರಣದಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಾಗಾರ ಮತ್ತು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಆಡಳಿತ ಮಂಡಳಿ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ

ಪರಿಸರ ನಮ್ಮ ಉಸಿರು. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಕೃತಿಯ ಜೊತೆಗಿನ ಒಡನಾಟ ಅಗತ್ಯ ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ.ಜಿಲ್ಲಾ ಕಸಾಪ ಉಳ್ಳಾಲ ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಅವರು ಮನುಷ್ಯ ತಾನೂ ಪ್ರಕೃತಿಯ ಭಾಗ ಎಂಬುದನ್ನು ಮರೆತು ಬದುಕುತ್ತಿದ್ದಾನೆ. ಪ್ರಕೃತಿ ಇರುವುದೇ ತನ್ನ ಆಸೆಗಳನ್ನು ಪೂರೈಸುವುದಕ್ಕಾಗಿ ಎಂದು ಭಾವಿಸಿದ್ದಾನೆ. ಇದು ತಪ್ಪು. ಗಿಡ ಮರ ಪಕ್ಷಿ ಪ್ರಾಣಿಗಳಿಗಿರುವಷ್ಟೇ ಬದುಕುವ ಹಕ್ಕು ಮನುಷ್ಯನಿಗೂ ಇರುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಗಾಯಕ ತೋನ್ಸೆ ಪುಷ್ಕಳ ಕುಮಾರ್ ಅವರು ಪರಿಸರ ಗೀತೆಗಳನ್ನು ಹಾಡಿದರು. ಸಮಾರಂಭದಲ್ಲಿ ನಾಗಬ್ರಹ್ಮ ಪ್ರಗತಿಪರ ಸ್ವ ಸಹಾಯ ಸಂಘದ ಅಧ್ಯಕ್ಷ ಹಸನ್ ಕುಂಞಿ ಕೋಡಿಜಾಲ್, ಬ್ರಹ್ಮಸನ್ನಿಧಿ ನಾಗ ಪರಿವಾರ ಕ್ಷೇತ್ರದ ಅಧ್ಯಕ್ಷ ಮಹಾಬಲ ಗಟ್ಟಿ, ಪೊಸಕುರಲ್ ನಿರ್ದೇಶಕ ವಿದ್ಯಾಧರ ಶೆಟ್ಟಿ, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ  ಎ.ಕೆ ರಹಿಮಾನ್, ಕೊಣಾಜೆ ಪದವು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೀವ್ ನಾಯ್ಕ್ ಉಪಸ್ಥಿತರಿದ್ದರು. 

ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ನಿರೂಪಿಸಿ ದರು.  ಕಾರ್ಯಕ್ರಮದ ಸಂಚಾಲಕ ನಾಗಬ್ರಹ್ಮ ಸನ್ನಿಧಿ ಸಮಿತಿಯ ಪ್ರಮುಖ ಅಚ್ಯುತ ಗಟ್ಟಿ ಪ್ರಸ್ತಾವನೆ ಮಾಡಿ ದರು. ವಿದ್ಯಾಧರ ಶೆಟ್ಟಿ ಪೊಸಕುರಲ್  ವಂದಿಸಿದರು.

Similar News