ಉಳ್ಳಾಲ: ಜಾನುವಾರು ಸಾಗಾಟ; ನಾಲ್ವರ ಬಂಧನ

Update: 2023-06-06 07:45 GMT

ಮಂಗಳೂರು: ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ನಾಲ್ವರನ್ನು ಸೋಮವಾರ ತಡ ರಾತ್ರಿ ಪೊಲೀಸರು ಕಲ್ಲಾಪು ಬಳಿ ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತರನ್ನು ಉಳ್ಳಾಲ ಮೂಲದ ಅಹಮ್ಮದ್ ಇರ್ಷಾದ್, ಜಾಫರ್ ಸಾದಿಕ್ , ಫಯಾಝ್ ಮತ್ತು ಮಂಜೇಶ್ವರದ ಖಾಲಿದ್ ಬಿಎಂ ಎಂದು ಗುರುತಿಸಲಾಗಿದೆ.

ಅಂಬ್ಲಮೊಗರು ಎಂಬಲ್ಲಿಂದ ನಾಲ್ಕು ಹಸುಗಳನ್ನು ಖರೀದಿಸಿ ಕೇರಳ ನೋಂದಾಯಿತ ಸಂಖ್ಯೆಯ ಮಿನಿ ಗೂಡ್ಸ್ ವಾಹನದಲ್ಲಿ ಉಳ್ಳಾಲದ ಅಲೇಕಲಕ್ಕೆ ಸಾಗಿಸುತ್ತಿದ್ದರು. ಈ ವಾಹನವನ್ನು ದ್ವಿಚಕ್ರದಲ್ಲಿ ಒಬ್ಬ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. 

ದಾರಿ ಮಧ್ಯೆ ವಾಹನ ಕೆಟ್ಟು ಹೋದ ಕಾರಣ ಮೂವರು ಸೇರಿ ವಾಹನವನ್ನು ತಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ವಾಹನವನ್ನು ತಳ್ಳಿ ಸಹಾಯ ಮಾಡಲು ಹೋದಾಗ ವಾಹನದಲ್ಲಿ ನಾಲ್ಕು ಹಸುಗಳನ್ನು ಕಟ್ಟಿ ಟಾರ್ಪಲ್ ಹಾಸಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ವಾಹನ, ಹಸುಗಳು ಹಾಗೂ ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ನಿವಾಸಿ ಶರತ್ ಕುಮಾರ್ ನೀಡಿದ ದೂರಿನ ಮೇರೆಗೆ ಗೋಹತ್ಯೆ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆ, ಐಪಿಸಿ 379ರ ಅಡಿಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Similar News