ಮಂಗಳೂರು: ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

Update: 2023-06-06 14:29 GMT

ಮಂಗಳೂರು : ಮಣಿಪುರದಲ್ಲಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ದ.ಕ. ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇದರ ವತಿಯಿಂದ ಮಂಗಳವಾರ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ಮಂದಿ ಕ್ರೈಸ್ತ ಸಮುದಾಯದವರು, ಧರ್ಮಗುರುಗಳು, ಧರ್ಮಭಗಿನಿಯರು, ಇತರ ಸಮುದಾಯ ಮತ್ತು ಸಂಘಟನೆಗಳ ಸಮಾನ ಮನಸ್ಕರು ಪಾಲ್ಗೊಂಡರಲ್ಲದೆ ಬಿಜೆಪಿ ಸರಕಾರದ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು.

ಮುಖ್ಯ ಭಾಷಣಗೈದ ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ. ಪಾವೋಸ್ತಿನ್ ಲೋಬೋ ‘ಕಾನೂನು ಪ್ರಕಾರ ಎಲ್ಲರೂ  ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸರಕಾರ ಕಲ್ಪಿಸಬೇಕು. ಮಣಿಪುರ ರಾಜ್ಯ ಸರಕಾರವು ಈ ವಿಚಾರದಲ್ಲಿ ತಾರತಮ್ಯ ಎಸಗುತ್ತಿವೆ. ದುರ್ಬಲ ಪ್ರಜೆಗಳು  ತಮ್ಮನ್ನು ತಾವು ರಕ್ಷಿಸಿಕೊಳ್ಳದ ಸ್ಥಿತಿ ಮಣಿಪುರ ದಲ್ಲಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ಮಣಿಪುರ ಸರಕಾರವು ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದರು.

ಮಣಿಪುರ ರಾಜ್ಯ ಸರಕಾರವು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ. ಮೈತೈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರಿಶ್ಚಿಯನ್ನರ ಹಾಗೂ ಚರ್ಚ್‌ಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಿವೆ. ಇದರಿಂದ ನೂರಾರು ಮಂದಿ ಪ್ರಾಣ ಕಳಕೊಂಡಿದ್ದಾರೆ. 50 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿಗೆ ಹಾನಿಯಾಗಿದೆ. 9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ದೂರಸಂಪರ್ಕ, ಇಂಟರ್‌ನೆಟ್ ಸಹಿತ ಎಲ್ಲಾ ರೀತಿಯ ಸಂಪರ್ಕಗಳನ್ನು ಕಡಿತಗೊಳಿಸ ಲಾಗಿದೆ. ಜನಜೀವನವು ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿವೆ. ಇಷ್ಟೆಲ್ಲಾ ಆದರೂ ಕೂಡ ಕೇಂದ್ರ ಸರಕಾರವು ಮೌನ ತಾಳಿದೆ ಎಂದು ಫಾ. ಪಾವೋಸ್ತಿನ್ ಲೋಬೋ ಆರೋಪಿಸಿದರು.

ಭಗಿನಿ ಸಿಸಿಲಿಯಾ ಮೆಂಡೋನ್ಸಾ, ಮದರ್ ತೆರೇಸಾ ವಿಚಾರ ವೇದಿಕೆಯ ರೊಯ್ ಕ್ಯಾಸ್ಟಲಿನೋ ಮಾತನಾಡಿದರು.

ಈ ಸಂದರ್ಭ ಮಂಗಳೂರು ಧರ್ಮಪ್ರಾಂತದ ಶ್ರೇಷ್ಟ ಧರ್ಮಗುರು ಫಾ. ಮ್ಯಾಕ್ಸಿಂ ನೊರೊನ್ಹಾ,  ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್,  ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಉಪಮೇಯರ್ ಮುಹ್ಮಮದ್ ಕುಂಜತ್ತಬೈಲ್, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಐಸಿವೈಎಂನ ಅನಿಲ್ ಸಿಕ್ವೇರಾ, ಸಂಘಟಕರಾದ ಆಲ್ಪ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಜಾನ್ ಡಿಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.

Similar News