ಒಡಿಶಾ ರೈಲು ಅಪಘಾತದ ಕಾರಣ ಮುಚ್ಚಿಡುವ ಪ್ರಯತ್ನ: ಅನುಮಾನ ಸೃಷ್ಟಿಸಿದ ತನಿಖಾ ಸಮಿತಿ ಸದಸ್ಯರ ಟಿಪ್ಪಣಿ; ವರದಿ

Update: 2023-06-06 17:48 GMT

ಹೊಸದಿಲ್ಲಿ: ಕಳೆದ ಶುಕ್ರವಾರ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಸಿಗ್ನಲ್ ದೋಷವು ಸಂಭಾವ್ಯ ಕಾರಣವೆಂದು ಐವರು ರೈಲ್ವೆ ಅಧಿಕಾರಿಗಳ ತನಿಖಾ ಸಮಿತಿಯು ಸಲ್ಲಿಸಿರುವ ಪ್ರಾಥಮಿಕ ವರದಿಯ ಜೊತೆಗೆ ಅವರ ಪೈಕಿ ಓರ್ವರು ‘ಭಿನ್ನಾಭಿಪ್ರಾಯ ಟಿಪ್ಪಣಿ’ಯನ್ನೂ ಸಲ್ಲಿಸಿರುವುದು ಅಪಘಾತಕ್ಕೆ ಕಾರಣವಾಗಿದ್ದ ಘಟನಾವಳಿಗಳನ್ನು ಮುಚ್ಚಿಡಲು ದಾಖಲೆಯನ್ನು ತಿದ್ದುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಬಾಲಾಸೋರ್ನಲ್ಲಿರುವ ರೈಲ್ವೆಯ ಸಿಗ್ನಲ್ ಗಳು ಮತ್ತು ಸಂವಹನಗಳ ವಿಭಾಗದ ಹಿರಿಯ ಸೆಕ್ಷನ್ ಇಂಜಿನಿಯರ್ ಎ.ಕೆ.ಮಹಂತ ಅವರು ಈ ಭಿನ್ನಾಭಿಪ್ರಾಯ ಟಿಪ್ಪಣಿಗೆ ಸಹಿ ಮಾಡಿದ್ದಾರೆ ಎಂದು thewire.in ವರದಿ ಮಾಡಿದೆ. 

ಜೂ.3ರ ದಿನಾಂಕವನ್ನು ಹೊಂದಿರುವ ಭಿನ್ನಾಭಿಪ್ರಾಯ ಟಿಪ್ಪಣಿಯಲ್ಲಿ ಮಹಂತ ಅವರು, ‘ಪಾಯಿಂಟ್ 17ಎ ಅನ್ನು ಅಪ್ ಲೂಪ್ಲೈನ್ ಗೆ ಹೊಂದಿಸಲಾಗಿತ್ತು ಎಂಬ ಪ್ರಾಥಮಿಕ ವರದಿಯಲ್ಲಿನ ಉಲ್ಲೇಖವನ್ನು ನಾನು ಒಪ್ಪಿಲ್ಲ. ಡೇಟಾ ಲಾಗರ್ ರಿಪೋರ್ಟ್ ನ ಅವಲೋಕನದ ಆಧಾರದಲ್ಲಿ ಪಾಯಿಂಟ್ 17ಎ ಅನ್ನು ಸಾಮಾನ್ಯ ಮಾರ್ಗಕ್ಕೆ ಹೊಂದಿಸಲಾಗಿತ್ತು. ರೈಲು ಹಳಿ ತಪ್ಪಿದ ಬಳಿಕ ಇದು ಹಿಮ್ಮುಖವಾಗಬಹುದು’ ಎಂದು ಬರೆದಿದ್ದಾರೆ.

ಅಪಘಾತಕ್ಕೆ ಸಿಗ್ನಲ್ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಪ್ರಾಥಮಿಕ ವರದಿಯಲ್ಲಿ ಪಾಯಿಂಟ್ ನಂ.17 ಎ ಅನ್ನು ಬಿಎನ್ಬಿಆರ್ ನಿಲ್ದಾಣದ ಕಿ.ಮೀ.ನಂ.255/13-25ರಲ್ಲಿ ಅಪ್ ಲೂಪ್ ಲೈನ್ (ಹಿಮ್ಮುಖ ಸ್ಥಿತಿಯಲ್ಲಿ) ಹೊಂದಿಸಲಾಗಿತ್ತು ಎನ್ನುವುದು ಕಂಡು ಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಪಾಯಿಂಟ್ 17ಎಗೆ ಮೊದಲೇ ಲೆವೆಲ್ ಕ್ರಾಸಿಂಗ್ ಗೇಟ್ 94ರ ಹಿಂದೆಯೇ ರೈಲು ಹಳಿತಪ್ಪಿತ್ತು ಎಂದೂ ಮಹಂತ ತನ್ನ ಟಿಪ್ಪಣಿಯಲ್ಲಿ ಬರೆದಿದ್ದಾರೆ. ಪಾಯಿಂಟ್ 17ಎ ಅನ್ನು ರೈಲುಗಳು ಕ್ರಾಸಿಂಗ್ ಗ ಳಲ್ಲಿ ಹಳಿಗಳನ್ನು ಬದಲಿಸಲು ನೆರವಾಗುವ ವ್ಯವಸ್ಥೆ ಎಂದು ಸ್ಥೂಲವಾಗಿ ವ್ಯಾಖ್ಯಾನಿಸಬಹುದು.

ಡೇಟಾ ಲಾಗರ್ ನಿರ್ಣಾಯಕ

ಸ್ವಿಚ್ ಅಥವಾ ಪಾಯಿಂಟ್ 17ಎ ಅನ್ನು ಲೂಪ್ ಲೈನ್ ಗೆ ಹೊಂದಿಸಲಾಗಿತ್ತು ಮತ್ತು ಅದಕ್ಕನುಗುಣವಾಗಿ ಕೋರಮಂಡಲ್ ಎಕ್ಸ್ಪ್ರೆಸ್ ಗಂಟೆಗೆ 128 ಕಿ.ಮೀ.ವೇಗದಲ್ಲಿ ಲೂಪ್ ಲೈನ್ ಪ್ರವೇಶಿಸಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದ್ದರೆ,ಮಹಂತ ತನ್ನ ಟಿಪ್ಪಣಿಯಲ್ಲಿ ಡೇಟಾ ಲಾಗರ್ (ಇದು ರೈಲ್ವೆಯ ಮಟ್ಟಿಗೆ ಬ್ಲಾಕ್ ಬಾಕ್ಸ್ ಇದ್ದಂತೆ) ಬೇರೆಯದನ್ನೇ ಹೇಳುತ್ತಿದೆ ಎಂದಿದ್ದಾರೆ. ಸ್ವಿಚ್ ಅನ್ನು ಸಾಮಾನ್ಯ ಮಾರ್ಗಕ್ಕೆ ಹೊಂದಿಸಲಾಗಿತ್ತು,ಅಂದರೆ ರೈಲು ನೇರವಾಗಿ ಮುಂದೆ ಚಲಿಸಲು ಅದು ಸೂಚಿಸಿತ್ತು ಎಂದು ಹೇಳಿರುವ ಅವರು,ಹಳಿ ತಪ್ಪಿದ ನಂತರ ಪಾಯಿಂಟ್ 17ಎ ಹಿಮ್ಮುಖವಾಗಿರಬಹುದು ಎಂದೂ ಟಿಪ್ಪಣಿಯಲ್ಲಿ ಬರೆದಿದ್ದಾರೆ.

ಸ್ವಿಚ್ ಅನ್ನು ಮರುಹೊಂದಿಸಿರಬಹುದು ಎಂದು ಮಹಂತ ಹೇಳುವಾಗ ಅವರು ಪೂರ್ವ ಘಟನಾವಳಿಗಳ ‘ಮುಚ್ಚಿಡುವಿಕೆ ’ಯನ್ನು ಸೂಚಿಸಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ,ಆದರೆ ತಜ್ಞರು ಸ್ಪಷ್ಟವಾಗಿದ್ದಾರೆ. ರೈಲು ನಿಲ್ದಾಣದ ಸಿಗ್ನಲ್ ವ್ಯವಸ್ಥೆಯ ಮೇಲೆ ನಿಗಾಯಿರಿಸುವ ಮತ್ತು ಎಲ್ಲ ಚಟುವಟಿಕೆಗಳನ್ನು ದಾಖಲಿಸಿಕೊಳ್ಳುವ ಡೇಟಾ ಲಾಗರ್ ದುರಂತಕ್ಕೆ ನಿಖರ ಕಾರಣವನ್ನು ತಿಳಿದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದೆ ಎನ್ನುತ್ತಾರೆ ತಜ್ಞರು.

ಡೇಟಾ ಲಾಗರ್ ಸಂದರ್ಭಗಳ ಮರುಸೃಷ್ಟಿಗೆ ನೆರವಾಗುತ್ತದೆ ಮತ್ತು ಅದರಲ್ಲಿಯ ದತ್ತಾಂಶಗಳನ್ನು ಮುಚ್ಚಿಡಲು ಅಥವಾ ತಿದ್ದಲು ಅವಕಾಶ ತೀರ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪ್ ಮೇನ್ಲೈನ್ ಗೆ ಸಿಗ್ನಲ್ ಅನ್ನು ನೀಡಲಾಗಿತ್ತು ಮತ್ತು ಅದನ್ನು ಹಿಂದೆಗೆದುಕೊಳ್ಳಲಾಗಿತ್ತು,ಆದರೆ ರೈಲು ಲೂಪ್ ಲೈನ್ನ್ನು ಪ್ರವೇಶಿಸಿತ್ತು ಮತ್ತು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು ಎಂದು ಪ್ರಾಥಮಿಕ ವರದಿಯು ತಿಳಿಸಿದೆ.

ವಿಧ್ವಂಸಕ ಕೃತ್ಯ ತಳ್ಳಿ ಹಾಕಿದ ಅಧಿಕಾರಿಗಳು

ರೈಲ್ವೆ ಮಂಡಳಿಯು ಬಹುಶಃ ಸರಕಾರದ ಒತ್ತಾಯದ ಮೇರೆಗೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆಯಾದರೂ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಧಿಕಾರಿಗಳು,ಅಪಘಾತಕ್ಕೆ ವಿಧ್ವಂಸಕ ಕೃತ್ಯದ ಕಾರಣವನ್ನು ತಳ್ಳಿಹಾಕಿದರು. ಸ್ಟೇಷನ್ ಮಾಸ್ಟರ್ ಮತ್ತು ಸಿಗ್ನಲ್ ನಿರ್ವಾಹಕ ಮಾತ್ರ ಸಿಗ್ನಲ್ ರಿಲೇ ಕೊಠಡಿಯನ್ನು ಪ್ರವೇಶಿಸಬಹುದು. ಇಬ್ಬರೂ ಪ್ರತ್ಯೇಕ ಚಾವಿಗಳನ್ನು ಹೊಂದಿದ್ದು,ಇವುಗಳನ್ನು ಏಕಕಾಲಕ್ಕೆ ಬಳಸಿದರೆ ಮಾತ್ರ ಕೊಠಡಿಯು ತೆರೆದುಕೊಳ್ಳುತ್ತದೆ.

ಕೊಠಡಿಯು ಭಾರೀ ಭದ್ರತೆಯನ್ನು ಹೊಂದಿದ್ದು,ಹೊರಗಿನವರು ಅದನ್ನು ಪ್ರವೇಶಿಸಲು ಅವಕಾಶವೇ ಇಲ್ಲ ಎಂದು ಅವರು ವಿವರಿಸಿದರು. ಅಧಿಕಾರಿಗಳು ಮಹಂತ ಅವರ ಭಿನ್ನಾಭಿಪ್ರಾಯ ಟಿಪ್ಪಣಿಯ ಸಿಂಧುತ್ವವನ್ನೂ ಪ್ರಶ್ನಿಸಿದ್ದಾರೆ. ಪ್ರಾಥಮಿಕ ವರದಿಗೆ ಸಹಿ ಹಾಕಿರುವ ಐವರು ಅಧಿಕಾರಿಗಳಲ್ಲಿ ಮಹಂತ ಕೂಡ ಸೇರಿದ್ದಾರೆ. ಭಿನ್ನಾಭಿಪ್ರಾಯವಿದ್ದರೆ ಅವರು ವರದಿಗೆ ಸಹಿ ಹಾಕಬಾರದಿತ್ತು. ಟಿಪ್ಪಣಿಯು ನಂತರ ಆಲೋಚನೆಯ ಫಲಶ್ರುತಿ ಎಂಬಂತೆ ಕಂಡು ಬರುತ್ತಿದೆ. ಅವರು ತಾನು ಕಂಡುಕೊಂಡಿದ್ದ ಅಂಶವನ್ನು ಮುಖ್ಯ ವರದಿಯಲ್ಲಿಯೇ ಉಲ್ಲೇಖಿಸಬೇಕಿತ್ತು ಎಂದು ಅವರು ಹೇಳಿದರು.

ಆದರೆ ರೈಲು ಲೂಪ್ಲೈನ್ ಪ್ರವೇಶಿಸುವ ಮೊದಲೇ ಹಳಿ ತಪ್ಪಿತ್ತು ಎಂಬ ಮಹಂತ ಅವರ ಎರಡನೇ ಪ್ರತಿಪಾದನೆಯನ್ನು ‘ಅಸಂಭವ’ ಎಂದು ಅಧಿಕಾರಿಗಳು ಹೇಳಿದರು. ರೈಲು ಪ್ರತಿ ಗಂಟೆಗೆ 128 ಕಿ.ಮೀ.ವೇಗದಲ್ಲಿ ಲೂಪ್ ಲೈನ್ ಪ್ರವೇಶಿಸಿತ್ತು ಮತ್ತು ಕೆಲವೇ ಕ್ಷಣಗಳಲ್ಲಿ ವೇಗವು ಶೂನ್ಯಕ್ಕೆ ಇಳಿದಿತ್ತು ಎನ್ನುವುದನ್ನು ಟ್ರೇನ್ ಲಾಗ್ ಸ್ಪಷ್ಟವಾಗಿ ತೋರಿಸುತ್ತಿದೆ. ಲೆವೆಲ್ ಕ್ರಾಸಿಂಗ್ನಲ್ಲಿಯೇ ರೈಲು ಹಳಿ ತಪ್ಪಿದ್ದರೆ ಅದು ಲೂಪ್ ಲೈನ್ನ್ನು,ಅದೂ ಅಷ್ಟೊಂದು ವೇಗದಲ್ಲಿ ಪ್ರವೇಶಿಸುತ್ತಿರಲಿಲ್ಲ. ಅಲ್ಲದೆ ಬಲ್ಲಾಸ್ಟ್, ಹಳಿಗಳು ಮತ್ತು ಚಕ್ರಗಳು ಹಳಿ ತಪ್ಪಿದ್ದಕ್ಕೆ ಸಾಕ್ಷವನ್ನು ಒದಗಿಸುತ್ತಿದ್ದವು. ಇಂಜಿನ್ ಗೂಡ್ಸ್ ರೈಲಿನ ಮೇಲೆ ಹಾರಿತ್ತು ಮತ್ತು ಇದು ಮುಖಾಮುಖಿ ಡಿಕ್ಕಿಯನ್ನು ಸೂಚಿಸುತ್ತದೆ ಎಂದರು.

Similar News