ಮಂಗಳೂರು: ಹೂಡಿಕೆಯ ಮೇಲೆ ಅಧಿಕ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ವಂಚನೆ

ಪ್ರಕರಣ ದಾಖಲು

Update: 2023-06-07 17:19 GMT

ಮಂಗಳೂರು, ಜೂ.7: ಹೂಡಿಕೆಯ ಮೇಲೆ ಅಧಿಕ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ 1.64 ಲ.ರೂ. ಪಡೆದು ವಂಚಿಸಿರುವ ಘಟನೆ ವರದಿಯಾಗಿದೆ.

ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ದೂರುದಾರರಿಗೆ ಜೂ.4ರಂದು ಇನ್‌ಸ್ಟಾಗ್ರಾಂ ಮೆಸೆಂಜರ್‌ನಲ್ಲಿ ಸಂದೇಶ ಮತ್ತು ಲಿಂಕ್ ಕಳುಹಿಸಿದ್ದ ಎನ್ನಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಇನ್‌ಸ್ಟಾಗ್ರಾಂ ಖಾತೆಯ ಪೇಜ್ ತೆರೆದುಕೊಂಡಿತ್ತು. ಆ ಬಳಿಕ ಅಪರಿಚಿತ ವ್ಯಕ್ತಿ 50,000 ರೂ. ಹೂಡಿಕೆ ಮಾಡಿದರೆ 4,90,000 ರೂ. ಲಾಭಾಂಶ ಬರುವುದಾಗಿ ಹೇಳಿದ್ದ. ಅದರಂತೆ ದೂರುದಾರರು 50,000 ರೂ. ಹಣ ವರ್ಗಾಯಿಸಿದರು. ಈ ವೇಳೆ ಅಪರಿಚಿತ ವ್ಯಕ್ತಿ 6,90,000 ರೂ. ಲಾಭಾಂಶ ಬಿಟ್‌ಕಾಯಿನ್ ರೂಪದಲ್ಲಿ ಬಂದಿರುವುದಾಗಿ ತಿಳಿಸಿದ. ಆ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಕಳುಹಿಸಿದ. ಅದನ್ನು ಖಾತೆಗೆ ಜಮೆ ಮಾಡಬೇಕಾದರೆ 64,000 ರೂ. ವರ್ಗಾಯಿಸುವಂತೆ ಹೇಳಿದ ಎನ್ನಲಾಗಿದೆ.

ದೂರುದಾರರು ಅದನ್ನು ನಂಬಿ ಹಣ ವರ್ಗಾಯಿಸಿದರು. ಮತ್ತೆ ಕಮಿಷನ್ ಮೊತ್ತವಾಗಿ ಹಣ ನೀಡುವಂತೆ ಅಪರಿಚಿತ ವ್ಯಕ್ತಿ ಹೇಳಿದ್ದು ಅದನ್ನು ಕೂಡ ದೂರುದಾರರು ವರ್ಗಾಯಿಸಿದ್ದರು. ಅನಂತರ ಲಾಭಾಂಶದ ಎಲ್ಲ ಹಣವನ್ನು ಖಾತೆಗೆ ಜಮೆ ಮಾಡಬೇಕಾದರೆ ಇನ್‌ಸ್ಟಾ ಗ್ರಾಂ ಖಾತೆಯನ್ನು ಖಾತರಿಗೊಳಿಸಬೇಕಾಗಿದೆ. ಇನ್‌ಸ್ಟಾಗ್ರಾಂ ಖಾತೆಯ ಪ್ರೊಫೈಲ್ ಎಡಿಟ್ ಮಾಡಿ ತಾನು ನೀಡಿದ ಇ-ಮೇಲ್ ಐಡಿ ಹಾಕುವಂತೆ ಹೇಳಿದ. ದೂರುದಾರರು ಅದರಂತೆ ಮಾಡಿದಾಗ ಅವರ  ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಆ ಇನ್‌ಸ್ಟಾ ಗ್ರಾಂ ಖಾತೆಯನ್ನು ಬಳಸಿ ಅಪರಿಚಿತ ವ್ಯಕ್ತಿಯು ದೂರುದಾರರ ಸ್ನೇಹಿತರಿಗೆ ಹಣ ಹೂಡಿಕೆ ಮಾಡುವಂತೆ ಸಂದೇಶಗಳನ್ನು ಕಳುಹಿಸಿದ್ದಾನೆ. ಅಪರಿಚಿತ ವ್ಯಕ್ತಿ ಒಟ್ಟು 1.64 ಲ.ರೂ. ವಂಚಿಸಿದ್ದಾನೆ ಎಂಬುದಾಗಿ  ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Similar News