ದ.ಕ.ಜಿಲ್ಲೆ: ಮಂಗಳೂರು ಸಹಿತ ಹಲವೆಡೆ ಬಿರುಸಿನ ಮಳೆ

ಜೂ.9-12 ‘ಎಲ್ಲೋ ಅಲರ್ಟ್’ ಘೊಷಣೆ

Update: 2023-06-08 15:45 GMT

ಮಂಗಳೂರು, ಜೂ.8: ನಗರ ಸಹಿತ ದ.ಕ.ಜಿಲ್ಲೆಯ ಹಲವು ಕಡೆ ಗುರುವಾರ ಮುಸ್ಸಂಜೆ ಬಿರುಸಿನ ಮಳೆ ಯಾಗಿದೆ. ಸಂಜೆಯವರೆಗೂ ಸುಡು ಬಿಸಿಲಿನಿಂದ ಕೂಡಿದ್ದ ನಗರದಲ್ಲಿ ಸಂಜೆಯಾಗುತ್ತಲೇ ಸುರಿದ ಬಿರುಸಿನ ಮಳೆಯಿಂದ ತಂಪಿನ ವಾತಾವರಣ ಸೃಷ್ಟಿಸಿದೆ. ಹಠಾತ್ ಮಳೆಯಿಂದಾಗಿ ನಗರದ ಕೆಲವು ಪ್ರಮುಖ ಮತ್ತು ಒಳ ರಸ್ತೆಗಳಲ್ಲಿ ನೀರು ನಿಂತಿತ್ತು.

ನಗರದ ಕೆಲವು ಪ್ರದೇಶಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 7ರ ಬಳಿಕ ಕೆಲಕಾಲ ಮಳೆ ಸುರಿಯಿತು. ಜಿಲ್ಲೆಯ ಉಳ್ಳಾಲ, ಬೆಳ್ತಂಗಡಿ, ಉಜಿರೆ, ವೇಣೂರು ಸಹಿತ ಹಲವು ಕಡೆಗಳಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ.

*ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡ ಬಿಪರ್‌ಜಾಯ್ ಚಂಡಮಾರುತವು ಉತ್ತರ ದಿಕ್ಕಿನತ್ತ ಚಲಿಸುತ್ತಿದ್ದು, ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂನ್ 4ರಂದು ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದೆ. ಜಿಲ್ಲೆಯಲ್ಲಿ ಇನ್ನೂ ಮುಂಗಾರು ಪ್ರವೇಶಿಸಿಲ್ಲ. ಚಂಡಮಾರುತದ ಪ್ರಭಾವದಿಂದ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ.

*ದ.ಕ. ಸಹಿತ ಕರಾವಳಿ ಪ್ರದೇಶಗಳಲ್ಲಿ ಜೂ.9ರಿಂದ 12ರವರೆಗೆ ‘ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಶನಿವಾರ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದರೂ ಮುಂಗಾರು ಮಳೆ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

*ಅರಬ್ಬಿ ಸಮುದ್ರದಲ್ಲಿ ಉತ್ತರಕ್ಕೆ ಚಲಿಸುತ್ತಿರುವ ಚಂಡಮಾರುತವು ಈಗಿನ ವರದಿಯ ಪ್ರಕಾರ ಜೂನ್ 15ರ ನಂತರ ಉತ್ತರ ಯೆಮನ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ದುರ್ಬಲ ವಾಗಿದ್ದು, ಕೇರಳ ಹಾಗೂ ರಾಜ್ಯದ ದಕ್ಷಿಣ ಕರಾವಳಿ ತೀರ ಭಾಗಗಳಗೆ ಮಾತ್ರ ಸೀಮಿತವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

*ಚಂಡಮಾರುತವು ರಾಜ್ಯದ ಕರಾವಳಿಯಿಂದ ದೂರ ಸರಿಯುತ್ತಿವೆ. ಆದಾಗ್ಯೂ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿವೆ. ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಸಮುದ್ರ ತೀರದ ಜನರಿಗೆ ಸ್ಥಳೀಯಾಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

*ಕರಾವಳಿಯಲ್ಲಿ ಗರಿಷ್ಠ 33.2 ಡಿಗ್ರಿ ಮತ್ತು ಕನಿಷ್ಟ 23 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಕರಾವಳಿಯಲ್ಲಿ ಗುರುವಾರ 1.21ಮಿಮಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿವೆ.

Similar News