ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತವರು ಜಿಲ್ಲೆಯವರಿಗೆ ತಪ್ಪಿದ ಅವಕಾಶ

Update: 2023-06-09 15:35 GMT

ಮಂಗಳೂರು, ಜೂ.9: ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದ.ಕ.ಜಿಲ್ಲೆಯವರಿಗೆ ದ್ವಿತೀಯ ಬಾರಿಗೆ ಉಸ್ತುವಾರಿ ಸಚಿವರಾಗುವ ಅವಕಾಶ ತಪ್ಪಿದೆ. ಅಲ್ಲದೆ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ತಲಾ ಎರಡನೇ ಬಾರಿಗೆ ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದಂತಾಗಿದೆ.‌

ಈ ಹಿಂದೆ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯ ಜಬ್ಬಾರ್ ಖಾನ್ ಹೊನ್ನಳ್ಳಿ ಅವರನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಲಾಗಿತ್ತು. ಇದೀಗ ಹೊರ ಜಿಲ್ಲೆಯ ಅಂದರೆ ಮೂಲತಃ ಕೊಡಗಿನ ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ದಿನೇಶ್ ಗುಂಡೂರಾವ್ ಅವರನ್ನು ನೇಮಿಸಲಾಗಿದೆ.

ಉಳಿದಂತೆ ಬಿಜೆಪಿ ಸರಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಇವರು ಪಕ್ಕದ ಜಿಲ್ಲೆಯವರಾದ ಕಾರಣ ಹೊರಗಿನವರು ಎಂಬ ಭಾವ ದ.ಕ. ಜಿಲ್ಲೆಯವರಿಗೆ ವ್ಯಕ್ತವಾಗುತ್ತಿರಲಿಲ್ಲ.

1997ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಉಸ್ತುವಾರಿ ಸಚಿವರುಗಳ ನೇಮಕ ಮಾಡುವ ಪರಿಪಾಠ ಬೆಳೆಯಿತು. ಆಯಾ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವುದು, ಪ್ರಮುಖ ಸರಕಾರಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ, ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಹಿತ ಸರಕಾರಿ ಕಾರ್ಯಕ್ರಮಗಳ ಧ್ವಜಾರೋಹಣ, ಸಂದೇಶ ನೀಡುವುದು ಇತ್ಯಾದಿ ಉಸ್ತುವಾರಿ ಸಚಿವರುಗಳ ಜವಾಬ್ದಾರಿಯಾಗಿತ್ತು.

1997ರಲ್ಲಿ ಜನತಾದಳ ಸರಕಾರವಿದ್ದಾಗ ದ.ಕ.ಜಿಲ್ಲೆಯವರೇ ಆದ ಬಿ.ಎ.ಮೊಯ್ದಿನ್ ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಇವರು ದ.ಕ.ಜಿಲ್ಲೆಯ ಪ್ರಪ್ರಥಮ ಉಸ್ತುವಾರಿ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಬಳಿಕ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ ರಮಾನಾಥ ರೈ ಉಸ್ತುವಾರಿ ಸಚಿವರಾಗಿ ದ್ದರು. ನಂತರ ಬಿಜೆಪಿಯ ನಾಗರಾಜ ಶೆಟ್ಟಿ, ಕಾಂಗ್ರೆಸ್‌ನ ರಮಾನಾಥ ರೈ, ಜಬ್ವಾರ್ ಖಾನ್ ಹೊನ್ನಳ್ಳಿ, ಬಿಜೆಪಿಯ ಕೃಷ್ಣ ಪಾಲೆಮಾರ್, ಕಾಂಗ್ರೆಸ್‌ನ ಯು.ಟಿ.ಖಾದರ್, ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸುನೀಲ್ ಕುಮಾರ್ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ರಮಾನಾಥ ರೈಗೆ ಎರಡು ಬಾರಿ ಉಸ್ತುವಾರಿ ಸಚಿವರಾಗುವ ಅವಕಾಶ ಸಿಕ್ಕಿತ್ತು.

ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಪೈಕಿ ಈ ಬಾರಿ ಮಂಗಳೂರು ಮತ್ತು ಪುತ್ತೂರು ಕ್ಷೇತ್ರದಿಂದ ಕ್ರಮವಾಗಿ ಕಾಂಗ್ರೆಸ್‌ನ ಯು.ಟಿ. ಖಾದರ್ ಮತ್ತು ಅಶೋಕ್ ಕುಮಾರ್ ರೈ ಶಾಸಕರಾಗಿ ಚುನಾಯಿತರಾಗಿದ್ದರು. ಜಿಲ್ಲೆಯವರೇ ಆದ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್, ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಈ ಐವರ ಪೈಕಿ ಯು.ಟಿ.ಖಾದರ್ ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರಾಗುವುದು ಖಚಿತ ಎಂದೇ ಭಾವಿಸಲಾ ಗಿತ್ತು. ಆದರೆ ಅವರನ್ನು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಉಳಿದ ನಾಲ್ಕು ಮಂದಿಗೆ ಸಚಿವರಾಗುವ ಭಾಗ್ಯ ಸಿಗಲಿಲ್ಲ. ಹಾಗಾಗಿ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಯಾರು ಎಂಬ ಕುತೂಹಲ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿತ್ತು. ಇದೀಗ ದಿನೇಶ್ ಗುಂಡೂರಾವ್‌ಗೆ ಉಸ್ತುವಾರಿ ಸಚಿವ ಸ್ಥಾನ ನೀಡುವುದ ರೊಂದಿಗೆ ಕುತೂಹಲಕ್ಕೆ ತೆರೆ ಬಿದ್ದಿದೆ.

Similar News