ಫಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯ ಬಿಡುಗಡೆ ತಡೆಗೆ ವಿಫಲ: ಮನಪಾ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ

15 ದಿನದೊಳಗೆ ವರದಿ ನೀಡಲು ಸೂಚನೆ

Update: 2023-06-10 06:04 GMT

ಮಂಗಳೂರು: ಫಲ್ಗುಣಿ (ಗುರುಪುರ) ನದಿಗೆ ಕೈಗಾರಿಕಾ ತ್ಯಾಜ್ಯ ಬಿಡುಗಡೆಯಾಗುವುದನ್ನು ತಡೆಯಲು ವಿಫಲವಾದ ಮಂಗಳೂರು ಮಹಾನಗರಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ  ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಜೂನ್‌ 4ರಂದು ಪ್ರಕಟಗೊಂಡ ಮಾಧ್ಯಮ ವರದಿಗಗಳ ಆಧಾರದಲ್ಲಿ ಲೋಕಾಯುಕ್ತ ಕಾಯಿದೆಯ ಸೆಕ್ಷನ್‌ 7(2) ಮತ್ತು 9(3-ಎ) ಅಡಿಯಲ್ಲಿ ಪ್ರಕರಣ ಕೈಗೆತ್ತಿಕೊಂಡಿರುವ ಉಪ ಲೋಕಾಯುಕ್ತ ಕೆ ಎನ್‌ ಫಣೀಂದ್ರ ಮುಂದಿನ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಪಾಲಿಕೆ ಉಪಾಯುಕ್ತ (ಆಡಳಿತ), ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಹಾಗೂ ಕೆಐಎಡಿಬಿ ಕಾರ್ಯಕಾರಿ ಅಭಿಯಂತರರಿಗೆ ಸೂಚನೆ ನೀಡಿದೆ.

ಆದೇಶ ದೊರತೆ 15 ದಿನಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚಿಸಿದ್ದಾರೆ.

ಒಳಚರಂಡಿಗಳ ಮೂಲಕ ನದಿಗೆ ತ್ಯಾಜ್ಯ ಬಿಡುಗಡೆಯಾಗುತ್ತಿರುವುದು ಜಲಚರಗಳಿಗೆ ಮಾತ್ರವಲ್ಲ ಆ ನೀರನ್ನು ಬಳಸುವ ಮನುಷ್ಯರಿಗೂ ಪ್ರಾಣಿಗಳಿಗೂ ಹಾನಿಕರವಾಗಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಉಪಲೋಕಾಯುಕ್ತರು ತಿಳಿಸಿದ್ದಾರೆ.

ಪಣಂಬೂರು ಮತ್ತು ಬೈಕಂಪಾಡಿ ಪರಿಸರದಲ್ಲಿ ಕಾರ್ಯಾಚರಿಸುವ ಹಲವು ಕೈಗಾರಿಕೆಗಳು ತ್ಯಾಜ್ಯ ಸಂಸ್ಕರಣೆ ನಡೆಸದೆ ಅವುಗಳನ್ನು ನೇರವಾಗಿ ನದಿಗೆ ಬಿಡುಗಡೆಗೊಳಿಸುತ್ತಿವೆ. ಇದರಿಂದ ಸ್ಥಳೀಯ ಹಲವು ಬಾವಿ ನೀರು ಕಲುಷಿತಗೊಂಡಿದೆ.  

ನದಿಗೆ ಹಾನಿಕಾರಕ ತ್ಯಾಜ್ಯ ಬಿಡುಗಡೆಯಾಗುವುದನ್ನು ತಕ್ಷಣ ನಿಲ್ಲಿಸಲು ಕ್ರಮಕೈಗೊಳ್ಳಬೇಕು ಹಾಗೂ ಈ ಕುರಿತು ಮಾಹಿತಿ ನೀಡಬೇಕೆಂದು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತಕ್ಕೆ  ಉಪಲೋಕಾಯುಕ್ತರು ಸೂಚಿಸಿದ್ದಾರೆ ಹಾಗೂ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ನಂತರ ನಿಗದಿಪಡಿಸಿದ್ದಾರೆ.

ಪತಂಜಲಿ ಫುಡ್ಸ್‌ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರಿಸರ ಅಧಿಕಾರಿಯ ಸಲಹೆ

ಫಲ್ಗುಣಿ ನದಿಗೆ  ಅಸಂಸ್ಕರಿತ ತ್ಯಾಜ್ಯ ನೀರನ್ನು ಬಿಡುಗಡೆಗೊಳಿಸುತ್ತಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಪತಂಜಲಿ ಫುಡ್ಸ್‌ ಲಿಮಿಟೆಡ್‌ ( ಹಿಂದಿನ ರುಚಿ ಸೋಯಾ ಇಂಡಸ್ಟ್ರೀಸ್)‌ ಅನ್ನು ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಿಗೆ ಮಂಡಳಿಯ ಪರಿಸರ ಇಂಜಿನಿಯರ್‌ ಸಲಹೆ ನೀಡಿದ್ದರು.

ಮೇ 31, 2023ರಲ್ಲಿ ಪರಿಸರ ಇಂಜಿನಿಯರ್‌ ಬಿ ಆರ್‌ ರವಿ ತಮ್ಮ ಪತ್ರದಲ್ಲಿ  ಈ ಕೈಗಾರಿಕೆಯಿಂದ ನದಿ ನೀರು ಮಲಿನವಾಗುತ್ತಿರುವುದನ್ನು ಉಲ್ಲೇಖಿಸಿ  ಜಲ ಮಾಲಿನ್ಯ ತಡೆ ಕಾಯಿದೆ 1974 ಇದರ ಸೆಕ್ಷನ್‌ 33(ಎ) ಅನ್ವಯ ಅದರ ತಕ್ಷಣ ಮುಚ್ಚುಗಡೆಗೆ ಆದೇಶ ನೀಡಬೇಕೆಂದು ಶೀಫಾರಸು ಮಾಡಿದ್ದರಲ್ಲದೆ ಈ ಮಾಲಿನ್ಯ ಕುರಿತಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಡಳಿತಾತ್ಮಕ ಅನುಮೋದನೆ ಕೂಡ ಕೋರಿದ್ದರು.

Similar News