ನಾಡೋಜ ಕಯ್ಯಾರ ಕಿಞ್ಞಣ್ಣ ರೈ 108ನೇ ಹುಟ್ಟುಹಬ್ಬ ಆಚರಣೆ

Update: 2023-06-10 12:02 GMT

ಮಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಬಹುಭಾಷಾ ವಿದ್ವಾಂಸ, ಪ್ರಗತಿಪರ ಚಿಂತಕ ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ 108ನೇ ಹುಟ್ಟುಹಬ್ಬದ ಆಚರಣೆಯು ನಗರದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಿದ್ವಾಂಸ ಡಾ.ಪ್ರಭಾಕರ ಜೋಶಿ ‘ಕನ್ನಡದ ದುಡಿಮೆ, ಗಡಿನಾಡ ದುಡಿಮೆ, ಅಧ್ಯಾಪಕತ್ವದ ದುಡಿಮೆ, ಕಾವ್ಯ-ಕೃತಿಗಳ ದುಡಿಮೆ ಹೀಗೆ ಬಹುನೆಲೆಗಳಲ್ಲಿ ದುಡಿಮೆಯ ಶಕ್ತಿಯನ್ನು ಕಾಣಿಸಿದ ಕಯ್ಯಾರರು ಎಲ್ಲಾ ಅರ್ಥದಲ್ಲೂ ‘ಕನ್ನಡದ ಬಂಟ’ ಎನ್ನಬಹುದು. ಅವರ ವ್ಯಕ್ತಿತ್ವ ರೂಪುಗೊಂಡ ಸಂಯುಕ್ತ ಪ್ರಭಾವವನ್ನು ಅವರ ಕಾವ್ಯಗಳಲ್ಲಿ ಗುರುತಿಸಬಹುದು ಎಂದರು.

ಆಧುನಿಕ ಮೌಢ್ಯಗಳಿಂದ ದೂರವಿದ್ದುಕೊಂಡು ಗಟ್ಟಿ ನಿಲುವಿನ ಚಿಂತಕನಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಪ್ರಗತಿಪರ ಕೃಷಿಕನಾಗಿ, ಲೇಖಕನಾಗಿ, ನಾಡಿಗೆ ಮಾದರಿಯಾದ ಕಯ್ಯಾರರು ಹಳ್ಳಿಗಳಿಗೆ ಹಿಂತಿರುಗಿ ಎಂಬ ಗಾಂಧೀಜಿಯ ಕರೆಗೆ ಓಗೊಟ್ಟು ಹಳ್ಳಿಯಲ್ಲಿ ನೆಲೆ ನಿಂತರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬುದನ್ನು ಬದುಕಿನ ಮುಖ್ಯ ಪ್ರಜ್ಞೆಯಾಗಿರಿಸಿಕೊಂಡಿದ್ದರು. ಬೆಂಗಳೂರು- ಮೈಸೂರು ಕೇಂದ್ರಿತವಾಗಿದ್ದ ಲೇಖಕ ರಿಗೆ ಸಮವಾಗಿ ನಿಲ್ಲಬಹುದಾದ ಎಲ್ಲ ಪ್ರತಿಭೆ ಸಾಮರ್ಥ್ಯ ಉಳ್ಳವರಾಗಿದ್ದ ಕಯ್ಯಾರರ ಸಂಸ್ಮರಣೆಯ ಮೂಲಕ ಅವರ ಕಾವ್ಯದ ಮರುಹುಟ್ಟು ಪಡೆಯುತ್ತದೆ ಎಂದು ಜೋಶಿ ಅಭಿಪ್ರಾಯಪಟ್ಟರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಕವಿ ಹುಸೈನ್ ಕಾಟಿಪಳ್ಳ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಾರನಾಥ ಹೊಳ್ಳ, ಚಂದ್ರಶೇಖರ ಮಯ್ಯ, ಕವಿತಾ ಪಕ್ಕಳ, ಜಿ.ಕೆ. ಭಟ್, ನಾ. ಚಂಬಲ್ತಿಮಾರ್ ಉಪಸ್ಥಿತರಿದ್ದರು.

ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಝೇಂಕಾರ ಬಳಗದ ಜಯಶ್ರೀ ಅರವಿಂದ್  ಕಯ್ಯಾರರ ರಚನೆಗಳನ್ನು ಹಾಡಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Similar News