ಪಿಲಿಕುಳ ಪಾರ್ಕ್ ಹಗರಣಗಳ ತಾಣವಾಗಿದೆ: ಎನ್‌ಇಸಿಎಫ್ ಆರೋಪ

Update: 2023-06-10 16:11 GMT

ಮಂಗಳೂರು: ಪಿಲಿಕುಳ ಉದ್ಯಾನ ಹಗರಣಗಳ ತಾಣವಾಗಿದ್ದು, ಇಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳು ದಯನೀಯ ಸ್ಥಿತಿಯಲ್ಲಿದೆ. ಇದರ ನಿರ್ವಹಣೆ ಹೊಣೆ ಹೊತ್ತಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ಕಳಪೆ ನಿರ್ವಹಣೆ, ಅಧಿಕಾರ ಮತ್ತು ಹಣದ ದುರ್ಬಲಕೆ ಮಾಡುತ್ತಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ರಿ) ಆರೋಪಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಕಾರ್ಯದರ್ಶಿ ಎಚ್ ಶಶಿಧರ ಶೆಟ್ಟಿ ಅವರು ಪಿಲಿಕುಲ ಉದ್ಯಾದ ನಿರ್ವಹಣೆಯನ್ನು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

ಪಿಲಿಕುಳ ಉದ್ಯಾನವು ಪ್ರಾಣಿ, ಪಕ್ಷಿಗಳಿಗೆ ಜೈಲಿನಂತಾಗಿದೆ. ಅವುಗಳಿಗೆ ಸ್ವಚ್ಛಂದವಾಗಿ ಕಾಡಿನಲ್ಲಿ ಸ್ವಾತಂತ್ರ್ಯ ಇಲ್ಲದಾಗಿದೆ. ಪ್ರಾಣಿ, ಪಕ್ಷಿಗಳನ್ನು ಕೂಡಿಹಾಕಿ ಅವುಗಳಿಗೆ ಹಿಂಸೆ ನೀಡಲಾಗುತ್ತಿದೆ. ಒಂದೊಂದು ಗೂಡುಗಳಲ್ಲಿ 55 ಗಿಳಿಗಳಿವೆ. ಪ್ರಾಣಿಗಳು ಕಲ್ಲುಬಂಡೆಗಳ ಮತ್ತು ಅಕೇಶಿಯಾ ಮರಗಳ ನಡುವೆ ಓಡಾಡುವಂತಾಗಿದೆ. ಪ್ರವಾಸಿತಾಣ, ಜ್ಞಾನ ನೀಡುವ ಕೇಂದ್ರವಾಗಬೇಕಿದ್ದ ಪಿಲಿಕುಲ ಉದ್ಯಾನದಲ್ಲಿ ಕ್ಯಾಮರಾ ತೆಗೆದುಕೊಂಡು ಹೋದವನಿಗೆ 500 ರೂ. ಒಳಗೆ ಪ್ರವೇಶಕ್ಕೆ 80 ರೂ. ವಿಧಿಸಲಾಗುತ್ತದೆ. ಇದು ಹಣಮಾಡಲು ಇರುವ ಕೇಂದ್ರವಾಗಿ ಬದಲಾಗಿದೆ ಎಂದು ಅಪಾದಿಸಿದರು.

ಹಲವು ದೂರುಗಳ ಹಿನ್ನೆಲೆಯಲ್ಲಿ  ಅಲ್ಲಿಗೆ ಎನ್‌ಇಸಿಎಫ್ ಹೋಗಿ ಪರಿಶೀಲಿಸಿದಾಗ ಅಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಅತ್ಯಂತ ದಯನೀಯ ಸ್ಥಿಯಲ್ಲಿರುವುದು.  ನೂರಾರು  ಕಾಡುಕೋಳಿಗಳು ಕಣ್ಮರೆಯಾಗಿರುವುದು, ಹೊರಗಿನಿಂದ ನಾಯಿಗಳು ಬಂದು ಪ್ರಾಣಿಗಳನ್ನು ಕೊಂದು ಹಾಕಿರುವುದು, ಮರಗಳನ್ನು   ಕಡಿದು ಸಾಗಾಟ ಮಾಡಿರುವ  ಪ್ರಕರಣ ಬೆಳಕಿಗೆ ಬಂದಿದೆ ಎಂದರು.

ಇತ್ತೀಚೆಗೆ ಗಂಡು ಹುಲಿಯು ಹೆಣ್ಣು ಹುಲಿಯನ್ನು ಕೊಂದು ಹಾಕಿರುವುದು ಪಿಲಿಕುಳ ಪಾರ್ಕ್‌ನ ಅಸರ್ಮಕ ನಿರ್ವಹಣೆಗೆ ಸಾಕ್ಷಿಯಾಗಿದೆ. ಇಲ್ಲಿರುವ ಪ್ರಾಣಿ, ಪಕ್ಷಿಗಳ  ಗೂಡುಗಳು ತುಕ್ಕು ಹಿಡಿದಿವೆ ಎಂದು ಹೇಳಿದರು.

ಎನ್‌ಇಸಿಎಫ್ ತಂಡವು ಪಿಲಿಕುಳ ಉದ್ಯಾನವನಕ್ಕೆ ಹಠಾತ್ ಭೇಟಿ ನೀಡಿದಾಗ ಕಂಡು ಬಂದಿರುವ ವಿಚಾರ ಗಳನ್ನು ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿ, ಕೇಂದ್ರ ಮೃಗಾಲಯ ಪ್ರಾಧಿಕಾರ,  ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ  ತಿಳಿಸಿ, ಇಲ್ಲಿ ನಡೆದಿರುವ ಪ್ರಾಣಿಗಳ ಸಾವಿನ ಪ್ರಕರಣ ಮತ್ತು ಹಗರಣಗಳ ಬಗ್ಗೆ ತನಿಖೆ  ನಡೆಸುವಂತೆ ಆಗ್ರಹಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎನ್‌ಇಸಿಎಫ್ ಸದಸ್ಯರಾದ ಬೆನಡಿಕ್ಟ್ ಫೆರ್ನಾಂಡಿಸ್, ಭುವನ್, ಅನಿಲ್, ನಾಗರಾಜ ಪದವಿನಂಗಡಿ, ರೀಟಾ ಪಿಂಟೊ ಉಪಸ್ಥಿತರಿದ್ದರು. 

Similar News