ಸುಳ್ಯ: ಪಕ್ಷ ವಿರೋಧಿ ಚಟುವಟಿಕೆ; 17 ಮಂದಿ ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಿ ಆದೇಶ
ಸುಳ್ಯ: 2023ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಡಿಕೇರಿ, ಕೆಪಿಸಿಸಿ ಮುಖಂಡ ಎಂ. ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಅಲ್ಲದೇ ಸುಳ್ಯ ಮತ್ತು ಕಡಬ ಸೇರಿ ಸುಳ್ಯ ವಿಧಾನ ಸಭಾ ಕ್ಷೇತ್ರದ 17 ಮಂದಿ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಹೇಳಿಕೆ ನೀಡಿದ್ದು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಪಕ್ಷದ ಅಭ್ಯರ್ಥಿಯ ಮತ್ತು ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸುಳ್ಯಕ್ಕೆ ಬಂದಾಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಜನರು ಬರದಂತೆ ಪ್ರಯತ್ನಿಸಿ ಸಭೆ ಸಮಾರಂಭಕ್ಕೆ ಗೈರು ಹಾಜರಾಗಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಗೌರವ ತೋರಿದ ಹಾಗೂ ನಂದಕುಮಾರ್ ಅಭಿಮಾನಿ ಬಳಗದೊಂದಿಗೆ ಸೇರಿ ನಂದಕುಮಾರ್ ವಾಟ್ಸಾಪ್ ಮೆಸೇಜ್ ನಿರ್ದೇಶನದಂತೆ ಮತದಾರರನ್ನು ತಟಸ್ಥರಾಗಿರುವಂತೆ ಪ್ರೇರೇಪಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಸಾಬೀತಾಗಿರುವುದರಿಂದ ಸುಳ್ಯದ ಕಾಂಗ್ರೆಸ್ ಮುಖಂಡರಾದ ಮಹೇಶ್ ಕುಮಾರ್ ಕರಿಕ್ಕಳ, ಗೋಕುಲ್ ದಾಸ್, ಆನಂದ ಬೆಳ್ಳಾರೆ, ಸಚಿನ್‍ರಾಜ್ ಶೆಟ್ಟಿ ಪೆರುವಾಜೆ, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ಚೇತನ್ ಕಜೆಗದ್ದೆ, ಕಡಬ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಉಷಾ ಅಂಚನ್, ಆಶಾ ಲಕ್ಷ್ಮಣ್ ಗುಂಡ್ಯ, ಪ್ರವೀಣ್ ಕೆಡೆಂಜಿ ಸವಣೂರು, ರವಿ ರುದ್ರಪಾದ, ರಾಮಕೃಷ್ಣ ಕೆಂಜಾಳ, ಜೈನ್ ಆತೂರು, ಫೈಜಲ್ ಕಡಬ ಶೋಬಿತ್ ಸುಬ್ರಹ್ಮಣ್ಯ, ಸ್ಕೇವಿಯರ್ ಬೇಬಿ, ಸುಧೀರ್ ದೇವಾಡಿಗ ಅವರನ್ನು ಪಕ್ಷದ ಕಾರ್ಯ ಚಟುವಟಿಕೆಯಿಂದ ಅಮಾನತುಗೊಳಿಸಲಾಗಿದೆ.
ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣಕರ್ತರಾಗಿ ಪಕ್ಷದ ಸೋಲಿಗೆ ಕಾರಣರಾದ ನಂದಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಕಾಂಗ್ರೆಸ್ ಮೂಲಕ ಪ್ರದೇಶ ಕಾಂಗ್ರೆಸ್‍ಗೆ ಮತ್ತು ಶಿಸ್ತು ಪಾಲನಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ತಿಳಿಸಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ತನ್ನ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುವ ಮತ್ತು ಐವರು ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಿರುವ ಪ್ರಕ್ರಿಯೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಸಂಯೋಜಕ ನಂದಕುಮಾರ್ ಅವರು ಅಮಾನತು ಮಾಡಿರುವವರಿಗೆ ತಲೆ ಕೆಟ್ಟಿದೆ. ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಯೋಗ್ಯತೆ ಇಲ್ಲದವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುವುದು ಅತ್ಯಂತ ಹಾಸ್ಯಾಸ್ಪದ. ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅನೇಕ ನಾಯಕರಿಗೆ ಬೇಕಾಗಿಲ್ಲ. ಅದಕ್ಕಾಗಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಎಲ್ಲ ಸಮೀಕ್ಷೆಗಳು, ಜನಾಭಿಪ್ರಾಯ ನನ್ನ ಪರವಾಗಿತ್ತು. ನಾನು ಅಭ್ಯರ್ಥಿಯಾಗಿದ್ದಲ್ಲಿ ಗೆಲುವು ಕೂಡಾ ಸಾಧ್ಯವಾಗುತ್ತಿತ್ತು. ಅಥವಾ ಉಳಿದ ಯಾರು ಅಭ್ಯರ್ಥಿಯಾಗಿದ್ದರೂ ಸೋಲಿನಲ್ಲಿ ಕನಿಷ್ಠ ಐದಾರು ಸಾವಿರವಷ್ಟೇ ಅಂತರವಿರುತ್ತಿತ್ತು. ಆದರೆ ಈ ನಾಯಕರಿಗೆ ಇದೆಲ್ಲಾ ಗೊತ್ತಾಗದಿದ್ದುದು ಯಾಕೆ? ಅಂದರೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅವರಿಗೆ ಬೇಕಿಲ್ಲ. ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಲು ಈಗ ಈ ಕ್ರಮಕ್ಕೆ ಮುಂದಾಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವತಃ ಅವರ ಬೂತ್‍ನಲ್ಲೇ ಲೀಡ್ ದೊರಕಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.