ರೈಲ್ವೆ ಸುರಕ್ಷತೆ ನಿಧಿಯ ಹಣ ಫೂಟ್ ಮಸಾಜರ್ ಗಳು, ಪಿಂಗಾಣಿಪಾತ್ರೆ, ಜಾಕೆಟ್, ವೇತನ ಪಾವತಿಗೆ ಬಳಕೆ: ಸಿಎಜಿ ವರದಿ

ಅನ್ಯ ಉದ್ದೇಶಗಳಿಗೆ ಬಳಕೆಯಾದ RRSK ನಿಧಿ

Update: 2023-06-10 16:34 GMT

ಹೊಸದಿಲ್ಲಿ: ರೈಲ್ವೆ ಸುರಕ್ಷತಾ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ನರೇಂದ್ರ ಮೋದಿ ಸರಕಾರವು 2017ರಲ್ಲಿ ಸೃಷ್ಟಿಸಿದ್ದ ವಿಶೇಷ ನಿಧಿಯ ಹಣವು, ಆದ್ಯತೆ ರಹಿತವಾದ ಉದ್ದೇಶಗಳಿಗೆ ಬಳಕೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ಪಾದದ ಮಸಾಜರ್ ಗಳು, ಪಿಂಗಾಣಿ ಪಾತ್ರೆಗಳು, ವಿದ್ಯುತ್ ಸಾಮಾಗ್ರಿಗಳು, ಪೀಠೋಪಕರಣಗಳು, ಚಳಿಗಾಲದ ಜಾಕೆಟ್ ಗಳು, ಕಂಪ್ಯೂಟರ್ ಗಳು, ಎಸ್ಕಲೇಟರ್ ಗಳ ಖರೀದಿಗೆ, ಉದ್ಯಾನವನಗಳನ್ನು ಅಭಿವೃದ್ಧಿಗೆ, ಶೌಚಗೃಹಗಳ ಪುನರ್ನಿರ್ಮಾಣಕ್ಕೆ, ನೌಕರರ ವೇತನ ಮತ್ತು ಬೋನಸ್ ಪಾವತಿ ಇತ್ಯಾದಿ ಉದ್ದೇಶಗಳಿಗೆ ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶದ (RRSK) ಹಣವನ್ನು ಬಳಸಲಾಗಿತ್ತೆಂದು ಸಿಎಜಿ ವರದಿ ಬಹಿರಂಗಪಡಿಸಿದೆ ಎಂದು telegraphindia.com ವರದಿ ಮಾಡಿದೆ..

2017-18ರಿಂದ 2020-21ರ 48 ತಿಂಗಳುಗಳ ಅವಧಿಯಲ್ಲಿನ ಡಿಸೆಂಬರ್ 2017, ಮಾರ್ಚ್ 2019, ಸೆಪ್ಟೆಂಬರ್ 2019, ಜನವರಿ 2021 ಈ ನಾಲ್ಕು ತಿಂಗಳುಗಳ 11,464 ರಶೀದಿ, ಬಿಲ್ಲುಗಳ ಯಾದೃಚ್ಚಿಕ (ಒಟ್ಟಾರೆ) ಪರಿಶೀಲನೆಯಿಂದ ಈ ವಿಷಯ ಬೆಳಕಿಗೆ ಬಂದಿದೆ. ಪ್ರತಿ ರೈಲ್ವೆ ವಲಯದ ಎರಡು ಆಯ್ದ ವಿಭಾಗಗಳಲ್ಲಿ ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶ (ಆರ್ಆರ್ಎಸ್ಕೆ) ನಿಧಿಗೆ ಸೇರಿದ 48.21 ಕೋಟಿ ರೂ.ಗಳನ್ನು ಮೇಲೆ ತಿಳಿಸಿದಂತಹ ಉದ್ದೇಶಗಳಿಗೆ ಬಳಸಲಾಗಿದೆಯೆಂದು ವರದಿ ತಿಳಿಸಿದೆ.

RRSK ನಿಧಿಯನ್ನು 2017-18ನೇ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ‘ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ ಕಾರ್ಪಸ್ನಿಧಿಯೊಂದಿಗೆ ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶವನ್ನು ಸ್ಥಾಪಿಸಲಾಗಿದೆ’ ಎಂದು ಆಗ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಘೋಷಿಸಿದ್ದರು. ಆದರೆ ಈ ನಿಧಿಯ ಹಣವನ್ನು ರೈಲ್ವೆ ಇಲಾಖೆಯು ಆಡಂಬರ ಹಾಗೂ ಐಶಾರಾಮದ ಉದ್ದೇಶಗಳಿಗೂ ಬಳಸಿರುವುದನ್ನು ವರದಿಬೆಟ್ಟು ಮಾಡಿ ತೋರಿಸಿದೆ.

2022ರ ಡಿಸೆಂಬರ್ ನಲ್ಲಿ ಭಾರತೀಯ ಲೆಕ್ಕಮಹಾಪರಿಶೋಧಕರು ಸಲ್ಲಿಸಿದ ರೈಲು ಹಳಿತಪ್ಪುವಿಕೆ ಕುರಿತ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದರು.

2015ರಲ್ಲಿ ಭಾರತೀಯ ರೈಲ್ವೆ ಕುರಿತು ಹೊರಡಿಸಿದ ಶ್ವೇತಪತ್ರವೊಂದರಲ್ಲಿ ದೇಶದ 1.14 ಲಕ್ಷ ಕೋಟಿ ರೈಲ್ವೆ ಜಾಲದಲ್ಲಿ 4500 ಕಿ.ಮೀ. ಹಳಿಗಳನ್ನು ವಾರ್ಷಿಕವಾಗಿ ನವೀಕರಿಸಬೇಕೆಂದು ಶಿಫಾರಸು ಮಾಡಿತ್ತು. ರೈಲ್ವೆ ಸುರಕ್ಷಾ ನಿಧಿಯ ಸ್ಥಾಪನೆಗೆ ಇದೂ ಒಂದು ಪ್ರಮುಖ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ರೈಲ್ವೆ ಸಂರಕ್ಷಣಾ ಕೋಚ್ನ ನಿಧಿಗೆ ಅತ್ಯಂತ ಕಳಪೆಮಟ್ಟದಲ್ಲಿ ಆರ್ಥಿಕ ನಿಧಿಯನ್ನು ಒದಗಿಸಲಾಗಿತ್ತೆಂದು ವರದಿ ಗಮನಸೆಳೆದಿದೆ. ಮೂಲ ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಈ ನಿಧಿಗೆ 20 ಸಾವಿರ ಕೋಟಿ ರೂ. ಬಜೆಟ್ ಅನುದಾನವಾಗಿ ಬರಬೇಕಿತ್ತು. ಉಳಿದ 5 ಸಾವಿರ ಕೋಟಿರೂ.ಗಳನ್ನು ರೈಲ್ವೆಯ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಬೇಕಾಗಿತ್ತು.

ನಾಲ್ಕು ವರ್ಷಗಳ ಅವಧಿಯಲ್ಲಿ RRSK ನಿಧಿಗೆ 20 ಸಾವಿರ ಕೋಟಿ ರೂ. ಹರಿದುಬರಬೇಕಿತ್ತು. ಆದರೆ ಕೇವಲ 4225 ಕೋಟಿ ರೂ. ಅಷ್ಟೇ ಪಾವತಿಯಾಗಿದ್ದು, 15,775 ಕೋಟಿ ರೂ.ಅಥವಾ 78.9 ಶೇಕಡಾ ಕೊರತೆಯುಂಟಾಗಿತ್ತು.

Similar News