ವಿದ್ಯುತ್ ದರ ಏರಿಕೆ ಹಿಂಪಡೆಯಲು ಸಿಪಿಎಂ ಒತ್ತಾಯ
Update: 2023-06-13 18:41 IST
ಮಂಗಳೂರು, ಜೂ.13: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿಧಾನ ಸಭಾ ಚುನಾವಣೆ ಮುಗಿಯುತ್ತಿ ದ್ದಂತೆಯೆ ಎಪ್ರಿಲ್‌ನಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಯುನಿಟ್‌ಗೆ ತಲಾ 7 ರೂ.ಹೆಚ್ಚಳ ಮಾಡಿರುವುದು ಮತ್ತು ಸುಮಾರು 5, 6 ಹಂತಗಳ ಸ್ಲಾಬ್ ದರ ಹೊಂದಿದ್ದ ವಿಧಾನವನ್ನು ಎರಡು ಹಂತಗಳಿಗೆ ಬದಲಾಯಿಸಿರುವುದು ಖಂಡನೀಯ. ತಕ್ಷಣ ಇದನ್ನು ಕೈ ಬಿಡಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ನೂರು ಯುನಿಟ್‌ಗಿಂತ ಹೆಚ್ಚುವರಿ ಬಳಸುವ ಗೃಹ ಬಳಕೆದಾರರು ಎಪ್ರಿಲ್‌ನಿಂದ ಜುಲೈಯೊಳಗೆ ಬಡ್ಡಿ ಮತ್ತು ಅಸಲು ಸೇರಿ ಹಲವು ಸಾವಿರ ರೂ.ಗಳ ಬಿಲ್‌ಗಳ ಹೊರೆಯನ್ನು ಭರಿಸಬೇಕಾಗುತ್ತದೆ. ಹಾಗಾಗಿ ಸರಕಾರ ತಕ್ಷಣ ವಿದ್ಯುತ್ ದರ ಹಿಂದಕ್ಕೆ ಪಡೆಯಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಆಗ್ರಹಿಸಿದ್ದಾರೆ.