×
Ad

ಮಂಗಳೂರು: ಪ್ರತ್ಯೇಕ ಮೂರು ಪ್ರಕರಣದಲ್ಲಿ ಆನ್‌ಲೈನ್ ವಂಚನೆ

Update: 2023-06-13 20:13 IST

ಮಂಗಳೂರು, ಜೂ.13: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆವೈಸಿ ಅಪ್‌ಡೇಟ್, ಪಾರ್ಟ್ ಟೈಂ ಜಾಬ್ ಮತ್ತಿತರ ಕಾರಣ ಹೇಳಿಕೊಂಡು ನಡೆಸಿದ ಮೂರು ವಂಚನೆಗಳ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಪ್ರಕರಣ 1: ಫಿರ್ಯಾದಿಯ ಮೊಬೈಲ್‌ಗೆ ಅಪರಿಚಿತನ ಮೊಬೈಲ್‌ನಿಂದ ‘ನಿಮ್ಮ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೆವೈಸಿ ಅಪ್‌ಡೇಟ್ ಮಾಡಬೇಕೆಂದು ಎಂಬ ಸಂದೇಶ  ಬಂದಿದೆ. ಬಳಿಕ ಫಿರ್ಯಾದಿದಾರರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್‌ಡೇಟ್‌ಗಾಗಿ ಬ್ಯಾಂಕ್  ಕಸ್ಟಮರ್ ಐಡಿ, ಎಟಿಎಂ ಕಾರ್ಡ್ ವಿವರ ಮತ್ತು ಅಕೌಂಟ್ ವಿವರ ನೀಡುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ಆ ವ್ಯಕ್ತಿಗೆ ವಿವರ ನೀಡಿದ್ದಾರೆ. ಹಾಗೇ ಒಟಿಪಿ ನೀಡಿದ್ದಾರೆ. ಬಳಿಕ ಬ್ಯಾಂಕ್ ಖಾತೆಯಿಂದ  99,999 ರೂ. ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

*ಪ್ರಕರಣ 2: ಜೂ. 12ರಂದು ಸಂಜೆ ಫಿರ್ಯಾದಿದಾರರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ಕೆವೈಸಿ ಅಪ್‌ಡೇಟ್‌ಗೆ ಸಂದೇಶ ಬಂದಿದೆ. ಅದರಲ್ಲಿ ಕಸ್ಟ್‌ಮರ್ ಕೇರ್ ಎಂದು ನೀಡಿದ್ದು, ಪಿರ್ಯಾದಿದಾರರು ಆ ಕಸ್ಟ್‌ಮರ್ ಕೇರ್ ಮೊಬೈಲ್‌ಗೆ ಕರೆ ವಿಚಾರಿಸಿದಾಗ ಆ ವ್ಯಕ್ತಿಯು ತಾನು ಕೆನರಾ ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡುವ ಅಧಿಕಾರಿ ಎಂದು ತಿಳಿಸಿ ಒಟಿಪಿ ಪಡೆದ ಬಳಿಕ ಬ್ಯಾಂಕ್ ಖಾತೆಯಿಂದ 1,75,000 ರೂ. ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ 3: ಮೇ 25ರಂದು ಅಪರಿಚಿತ ವ್ಯಕ್ತಿಯು ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಉದ್ಯೋಗದ ಬಗ್ಗೆ ಫಿರ್ಯಾದಿದಾರರ ವಾಟ್ಸಪ್ ನಂಬರ್‌ಗೆ ಟೆಲಿಗ್ರಾಮ್  ಲಿಂಕ್ ಕಳುಹಿಸಿದ್ದು, ಅದನ್ನು ನಂಬಿದ ಅಪರಿಚಿತ ನೀಡಿದ ಟಾಸ್ಕ್‌ನಂತೆ ಮೇ 28ರಿಂದ ಜೂ.1ರವರೆಗೆ ಹಂತಹಂತವಾಗಿ ಒಟ್ಟು 2,15,000 ರೂ. ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಾರೆ 3 ಪ್ರಕರಣದಲ್ಲಿ 4,89,999 ರೂ.ವಂಚಿಸಲಾಗಿದ್ದು, ಮಂಗಳೂರು ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News