×
Ad

ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ | ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ

Update: 2025-11-14 00:08 IST

ಬಾಗಲಕೋಟೆ : ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ ತಾಲ್ಲೂಕುಗಳಲ್ಲಿ ನ.13ರ ರಾತ್ರಿಯಿಂದ ನ.16ರ ಬೆಳಿಗ್ಗೆ 8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಸಂಗಪ್ಪ, ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಗುತ್ತಿದೆ. ಹೆಚ್ಚಿನ ಹಾನಿಯಾಗದಂತೆ ತಡೆಯಲು ಪ್ರತಿಭಟನೆ, ಮುಷ್ಕರ, ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಏನಿದು ಘಟನೆ :

ಬಾಗಲಕೋಟೆ  ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಸಮೀಪ ಇರುವ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ನಿಂತಿರುವ ಕಬ್ಬು ತುಂಬಿದ್ದ ಹಲವು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಗುರುವಾರ ಸಂಜೆ ನಡೆದಿತ್ತು.

ಕಬ್ಬು ಬೆಳೆಗೆ ಏಕ ದರ ನಿಗದಿಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ತಾಳ್ಮೆ ಕಳೆದುಕೊಂಡ ಕೆಲವರು, ಕಬ್ಬು ತುಂಬಿದ ಟ್ರ್ಯಾಕ್ಟರ್‌ ನೆಲಕ್ಕೆ ಉರುಳಿಸಿ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯು ನಾಳೆಯಿಂದ ಪ್ರಾರಂಭ ಮಾಡಬೇಕು ಎಂಬ ಉದ್ದೇಶದಿಂದ ಸುಮಾರು, 150 ಟ್ರ್ಯಾಕ್ಟರ್‌ ಕಬ್ಬು ತುಂಬಿಸಿ ಇಡಲಾಗಿದೆ. ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಹಿಂದಿನ ಬಾಕಿ ಹಣ ನೀಡುವ ಬಗ್ಗೆ ಚಕಾರ ಎತ್ತಿಲ್ಲ. ಮುಧೋಳ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗಿ ಆಗಿ ದರ ಘೋಷಣೆ ಮಾಡುವ ಜೊತೆಗೆ ಸಂಧಾನಕ್ಕೆ ಬರಲಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ರೈತರು ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಆಗ ಸಾಲಾಗಿ ನಿಂತಿದ್ದ ಕಬ್ಬಿನ ಟ್ರಾಕ್ಟರ್‌ಗೆ ಕೆಲವರು ಬೆಂಕಿ ಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News