×
Ad

Bagalkote | ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಾನಿಗೆ ಪರಿಹಾರ; ಘಟನೆ ಬಗ್ಗೆ ತನಿಖೆಗೆ ಆದೇಶ : ಸಚಿವ ಶಿವಾನಂದ ಪಾಟೀಲ್

Update: 2025-11-14 19:56 IST

ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಬಳಿ ಗುರುವಾರ ಸಂಭವಿಸಿದ ಬೆಂಕಿ ಪ್ರಕರಣ ಸಂಬಂಧ ಉಂಟಾಗಿರುವ ಹಾನಿಗೆ ಸಾಧ್ಯವಿರುವ ಪರಿಹಾರ ನೀಡಲಾಗುವುದು. ಅಲ್ಲದೆ, ಈ ದುರಂತದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ದುರಂತದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕೆಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರಕಾರದಿಂದ ಇಲ್ಲವೇ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು.

ಈ ಕೃತ್ಯದ ಹಿಂದಿರುವ ತಪ್ಪಿತಸ್ಥರು ಯಾರೇ ಇರಲಿ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸರಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದ್ದರಿಂದಲೇ ಈ ಹಂಗಾಮಿನಲ್ಲಿ ಇಳುವರಿ ಲೆಕ್ಕಾಚಾರ ಮಾಡದೆ ಪ್ರತಿಟನ್ ಕಬ್ಬಿಗೆ ಸರಾಸರಿ 200ರಿಂದ 250ರೂ.ಹೆಚ್ಚುವರಿ ಹಣ ಕೊಡಿಸಲು ಸಫಲವಾಗಿದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರಂಗರಾಜನ್ ಸಮಿತಿಯ ವರದಿ ಪ್ರಕಾರ ಬೆಳೆಗಾರರಿಗೆ 70:30 ಅನುಪಾತದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಅವರು ನುಡಿದರು.

ರಾಜ್ಯದಲ್ಲಿ 7.3ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ (5.67ಲಕ್ಷ ಹೆಕ್ಟೇರ್) ಇದೆ. ಕಬ್ಬು ನುರಿಸುವುದು ವಿಳಂಬವಾದರೆ ಸಕ್ಕರೆ ಇಳುವರಿ ಕಡಿಮೆಯಾಗುವುದಷ್ಟೇ ಅಲ್ಲದೆ, ರೈತರಿಗೂ ಸಮಸ್ಯೆಯಾಗಲಿದೆ. ತೂಕ ಕಡಿಮೆಯ ಜೊತೆಗೆ ಮುಂದಿನ ಹಂಗಾಮು ವ್ಯತ್ಯಯವಾಗಲಿದೆ. ಹೀಗಾಗಿ ಕಬ್ಬು ನುರಿಸುವುದು ಸುಗಮವಾಗಿ ನಡೆಯಲು ರೈತರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ರೈತರ ಹೋರಾಟವನ್ನು ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳಲಿದ್ದು, ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ. ಈ ಘಟನೆಯಿಂದ ಕೆಲವು ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಲು ಹಿಂದೇಟು ಹಾಕಿದ್ದು, ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಶಿವಾನಂದ ಪಾಟೀಲ್ ಹೇಳಿದರು.

‘ರಾಜ್ಯ ಸರಕಾರ ಯಾವುದೇ ಕಾರ್ಖಾನೆಗಳ ಮಾಲಕರಿಗೆ ಮಣಿದಿಲ್ಲ. ಮಣಿದಿದ್ದರೆ ಹೆಚ್ಚಿನ ಬೆಲೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಕಬ್ಬಿನ ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಗಳಿಸುವ ಲಾಭದ ಬಗ್ಗೆ ಹಾಗೂ ಸರಕಾರಕ್ಕೆ ಬರುವ ತೆರಿಗೆ ಬಗ್ಗೆಯೂ ತಪ್ಪು ಮಾಹಿತಿ ನೀಡುವ ಪ್ರಯತ್ನ ಆಗಬಾರದು. ಸಕ್ಕರೆ ರಫ್ತು ಪ್ರಮಾಣ ಹಾಗೂ ರಾಜ್ಯಕ್ಕೆ ನಿಗದಿಪಡಿಸಿರುವ ಎಥನಾಲ್ ಉತ್ಪಾದನೆ ಮಿತಿಯನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಬೇಕು. ವಾಣಿಜ್ಯ ಬಳಕೆಯ ಸಕ್ಕರೆ ಬೆಲೆಯನ್ನು ಹೆಚ್ಚಳ ಮಾಡಬೇಕೆಂಬುದು ರಾಜ್ಯದ ಬೇಡಿಕೆಯಾಗಿದೆ’

-ಶಿವಾನಂದ ಪಾಟೀಲ್, ಸಕ್ಕರೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News