Bagalkot | ನಿಂತಿದ್ದ ಕಾರು ಏಕಾಏಕಿ ಸ್ಫೋಟ: ತಪ್ಪಿದ ಭಾರಿ ದುರಂತ
ಜಮಖಂಡಿ (ಬಾಗಲಕೋಟೆ) : ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ನಿಂತಿದ್ದ ಮಹೀಂದ್ರಾ ಎಕ್ಸ್‌ಯುವಿ300 ಕಾರು ಏಕಾಏಕಿ ಸ್ಫೋಟಗೊಂಡು ಸಂಪೂರ್ಣ ಛಿದ್ರಛಿದ್ರವಾದ ಘಟನೆ ನಡೆದಿದೆ.
ಘಟನೆಯಲ್ಲಿ ವೈನ್‌ಶಾಪ್ ಮಾಲಕ ಹಣಮಂತ ಅಥಣಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಯಶ್ರೀ ಹಣಮಂತ ಅಥಣಿ ಅವರ ಹೆಸರಿನಲ್ಲಿರುವ ಈ ವಾಹನವನ್ನು ಸುಮಾರು ಮೂರು ವರ್ಷಗಳ ಹಿಂದೆ ಖರೀದಿಸಲಾಗಿತ್ತು. ತಡರಾತ್ರಿ ಸುಮಾರು 10.30ರ ವೇಳೆಗೆ ಸಂಭವಿಸಿದ ಸ್ಫೋಟದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.