ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀಳಗಿ ಪಟ್ಟಣದಲ್ಲಿ ರೈತರು ನಡೆಸುತ್ತಿರುವ ಧರಣಿಯಲ್ಲಿ 83ರ ಇಳಿ ವಯಸ್ಸಿನ ರೈತರೊಬ್ಬರು ಭಾಗಿಯಾಗಿ ಅನ್ನಾಹಾರ ತ್ಯಜಿಸಿ ಧರಣಿ ನಡೆಸುತ್ತಿದ್ದಾರೆ.

ಕಬ್ಬು ಬೆಳೆಗೆ ಸೂಕ್ತ ದರ ನೀಡುವಂತೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಕಳೆದೊಂದು ವಾರದಿಂದ ಬೀಳಗಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ. ಧರಣಿಗೆ ಬೆಂಬಲ ವ್ಯಕ್ತಪಡಿಸಿ, ತೋಳಮಟ್ಟಿ ಗ್ರಾಮದ ನಿವಾಸಿ 83 ವರ್ಷದ ಮಲ್ಲಪ್ಪ ಅಪ್ಪಣ್ಣ ಬಾವಿ ಎಂಬವರು ಕೂಡಾ ಧರಣಿಯನ್ನು ಸೇರಿಕೊಂಡಿದ್ದಾರೆ. ಕಬ್ಬಿಗೆ ಪ್ರತಿ ಟನ್ಗೆ 5,500 ರೂ. ನೀಡುವಂತೆ ಆಗ್ರಹಿಸಿ ಮಲ್ಲಪ್ಪ ಅಪ್ಪಣ್ಣ ಬಾವಿ ಕಳೆದ ನಾಲ್ಕು ದಿನಗಳಿಂದ ಅನ್ನಾಹಾರ ತ್ಯಜಿಸಿ ಧರಣಿ ನಡೆಸುತ್ತಿದ್ದಾರೆ.

ಬೇಡಿಕೆ ಇಡೇರುವವರೆಗೂ ಉಪವಾಸ ಧರಣಿ ಕೈ ಬಿಡುವುದಿಲ್ಲ ಎಂದು ಮಲ್ಲಪ್ಪ ಅಪ್ಪಣ್ಣ ಬಾವಿ ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ವಿನೋದ ಹತ್ತಳ್ಳಿ ಧರಣಿ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಉಪವಾಸ ಧರಣಿ ಕೈಬಿಡುವಂತೆ ಮಲ್ಲಪ್ಪ ಅಪ್ಪಣ್ಣ ಬಾವಿಯನ್ನು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಜಗ್ಗದ ಮಲ್ಲಪ್ಪ , ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ನೆರೆ ಸಂತ್ರಸ್ತ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಜಾಕ್ ವೆಲ್, ಕಾಲುವೆ ನೀರು ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಹಾಗೂ ಬ್ಯಾಂಕ್ ಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಹಾಗೂ ರೈತರ ಮಕ್ಕಳ ಶಿಕ್ಷಣ ಸಮಸ್ಯೆಗೂ ಪರಿಹಾರ ಕಲ್ಪಿಸುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ 83ರ ವಯಸ್ಸಿನಲ್ಲೂ ಹೋರಾಟ ಮಾಡುವ ಮೂಲಕ ಮಲ್ಲಪ್ಪ ಅಪ್ಪಣ್ಣ ಬಾವಿ ಗಮನ ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor