ಡಾ.ರಾಜಕುಮಾರ್ ಯರಗಲ್

ಬಾಗಲಕೋಟೆ : ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ರಾಜಕುಮಾರ್ ಯರಗಲ್ ಅವರನ್ನು ಕರ್ತವ್ಯ ಲೋಪ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಗುರುದತ್ತ ಹೆಗಡೆ ಅಮಾನತು ಆದೇಶ ಹೊರಡಿಸಿದ್ದು, ಡಾ.ರಾಜಕುಮಾರ್ ಯರಗಲ್ ವಿರುದ್ಧ ಹಲವು ಆಡಳಿತಾತ್ಮಕ ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಅಮಾನತು ಆದೇಶದಲ್ಲಿ ಕರ್ತವ್ಯ ಲೋಪ, ಕಚೇರಿಗೆ ಗೈರುಹಾಜರಿ, ಸರ್ಕಾರದ ಆದೇಶಗಳನ್ನು ಪಾಲಿಸದೆ ಸ್ವಇಚ್ಛೆಯಿಂದ ವರ್ತಿಸಿರುವುದು, ಸರ್ಕಾರಿ ಅಧಿಕಾರಿಗೆ ಅಗತ್ಯವಾದ ವೃತ್ತಿಪರತೆ ಮತ್ತು ಶಿಸ್ತಿನ ಕೊರತೆ, ಸಹೋದ್ಯೋಗಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ನಡೆಸಿರುವ ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಜಿಲ್ಲಾ ಪಂಚಾಯಿತಿಯ ಸೂಚನೆಗಳನ್ನು ಪಾಲಿಸದಿರುವ ಆರೋಪವೂ ದಾಖಲಾಗಿದೆ.

ಇನ್ನೊಂದು ಆರೋಪದ ಪ್ರಕಾರ, ವೈದ್ಯಾಧಿಕಾರಿಯಾಗಿದ್ದ ಪುತ್ರಿ ಡಾ. ಅಂಕಿತಾ ಯರಗಲ್ ಅವರಿಗೆ ನಿಯಮಬಾಹಿರವಾಗಿ ವೇತನ ಪಾವತಿಸಲಾಗಿದೆ ಎನ್ನಲಾಗಿದೆ. ಎಂಡಿ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿಯೂ ಅವರನ್ನು ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಮುಂದುವರಿಸಿ ಪ್ರತಿ ತಿಂಗಳು ಸುಮಾರು 75 ಸಾವಿರ ರೂ. ವೇತನ ಪಾವತಿಸಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಜಿಲ್ಲಾ ಪಂಚಾಯತ್‌ ಸಿಇಒ ಗಜಾನನ ಬಾಳೆ ದಾಖಲೆಗಳೊಂದಿಗೆ ನೋಟಿಸ್ ನೀಡಿದ್ದರೂ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆ ವರದಿಯ ಆಧಾರದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಡಾ. ರಾಜಕುಮಾರ್ ಯರಗಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಇಲಾಖಾ ತನಿಖೆ ನಡೆಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor