ಬಾಗಲಕೋಟೆ: ಪ್ರಚೋದನಕಾರಿ ಭಾಷಣ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿರುವ ಹೊರತಾಗಿಯೂ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಗರದಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರಮೋದ್ ಮುತಾಲಿಕ್ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡೆಗೆ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎಎಸ್ಪಿ ಜಗದೀಶ, ಡಿವೈಎಸ್ಪಿ ಗಜಾನನ ಸುತಾರ ಹಾಗೂ ಸಿಪಿಐ ವಿಜಯ ಬರಗುಂಡಿ ಅವರು ಭಾಂಡೆಗೆ ಅವರ ಮನೆಯಲ್ಲಿ ಮುತಾಲಿಕ್‌ನನ್ನು ಭೇಟಿಯಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಶಾಂತಿಗೆ ಧಕ್ಕೆ ತರುವಂತಹ ಪ್ರಚೋದನಕಾರಿ ಭಾಷಣ ಮಾಡಬಾರದು ಹಾಗೂ ಕೋಮು ಭಾವನೆ ಕೆರಳಿಸುವ ಪದಗಳನ್ನು ಭಾಷಣದಲ್ಲಿ ಬಳಸಬಾರದು. ಒಂದು ವೇಳೆ ಪ್ರಚೋದನಕಾರಿ ಭಾಷಣ ಮಾಡಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್ ಅವರು ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಭಾಷಣ ಮಾಡುವುದಿಲ್ಲ ಎಂದು ಪೊಲೀಸರಿಗೆ ಭರವಸೆ ನೀಡಿರುವುದಾಗಿ ವರದಿಯಾಗಿತ್ತು.

ಆದರೆ, ಬಳಿಕ ರಾತ್ರಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮುತಾಲಿಕ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದು, ಮಹಾತ್ಮಾ ಗಾಂಧೀಜಿ ಹಾಗೂ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಪೊಲೀಸರ ಎಚ್ಚರಿಕೆಯ ನಡುವೆಯೂ ಇಂತಹ ಹೇಳಿಕೆಗಳನ್ನು ನೀಡಿರುವ ಆರೋಪದ ಕುರಿತು ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor