ಬೆಂಗಳೂರು | ಯುವತಿಗೆ ಮಚ್ಚಿನಿಂದ ಹೊಡೆದು ಹಲ್ಲೆ: ಮನೆಗೆಲಸದ ಮಹಿಳೆಯ ಬಂಧನ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ.12: ಯುವತಿಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ ಆರೋಪದಡಿ ಮನೆಗೆಲಸದ ಮಹಿಳೆಯನ್ನು ಇಲ್ಲಿನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸುಶ್ಮಿತಾ(21) ಎಂಬಾಕೆಯ ಮೇಲೆ ಹಲ್ಲೆಗೈದ ಆರೋಪದಡಿ ಲಲಿತಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಲಲಿತಾ, ಬಸಪ್ಪ ಗಾರ್ಡನ್‍ನಲ್ಲಿರುವ ಸರೋಜಮ್ಮ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡು ಅವರೊಂದಿಗೆ ವಾಸವಿದ್ದಳು. ಸರೋಜಮ್ಮ ಅವರಿಗೆ ಪರಿಚಿತಳಾಗಿದ್ದ ಸುಶ್ಮಿತಾ ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದರು. ಅದೇ ರೀತಿ ಒಮ್ಮೆ ಮನೆಗೆ ಬಂದಾಗ ಲಲಿತಾ ಹಾಗೂ ಸುಶ್ಮಿತಾ ನಡುವೆ ಗಲಾಟೆಯಾಗಿತ್ತು. ವೈಯಕ್ತಿಕ ವಿಚಾರ ತೆಗೆದು ಲಲಿತಾಳಿಗೆ ಸುಶ್ಮಿತಾ ನಿಂದಿಸಿದ್ದಳು.
ಆಗಸ್ಟ್ 9ರಂದು ಸರೋಜಮ್ಮ ಅವರ ಮನೆಗೆ ಬಂದಿದ್ದ ಸುಶ್ಮಿತಾ, ಊಟ ಮುಗಿಸಿ ಮನೆಯ 3ನೇ ಮಹಡಿಯಲ್ಲಿರುವ ರೂಮ್‍ನಲ್ಲಿ ಮಲಗಿದ್ದಳು. ಈ ವೇಳೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೂಮ್‍ಗೆ ತೆರಳಿದ್ದ ಲಲಿತಾ, ಸುಶ್ಮಿತಾಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಳು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮನೆ ಮಾಲಕಿ ಸರೋಜಮ್ಮ ನೀಡಿರುವ ದೂರಿನನ್ವಯ ಹತ್ಯೆ ಯತ್ನ ಆರೋಪದಡಿ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.