×
Ad

ಸ್ವಾತಂತ್ರ್ಯ ದಿನಾಚರಣೆ | ಯುವಜನ ಜ್ಞಾನ, ಕೌಶಲ್ಯದ ಧಿಕ್ಕಿನಲ್ಲಿ ಮುಂದುವರೆಯಬೇಕು: ಥಾವರ್‌ ಚಂದ್ ಗೆಹ್ಲೋಟ್

Update: 2025-08-15 18:24 IST

ಬೆಂಗಳೂರು, ಆ.15: ‘ಕರ್ನಾಟಕ ಮತ್ತು ಭಾರತ’ ಎರಡೂ ಜಾಗತಿಕ ಮಟ್ಟದಲ್ಲಿ ನಾಯಕರಾಗಲು ಸಾಧ್ಯವಾಗುವಂತೆ ರಾಜ್ಯದ ಯುವಕರು ಜ್ಞಾನ, ಕೌಶಲ್ಯ ಮತ್ತು ನಾವೀನ್ಯತೆಯ ಧಿಕ್ಕಿನಲ್ಲಿ ಮುಂದುವರಿಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

ಶುಕ್ರವಾರ ನಗರದ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂಬರುವ ಪೀಳಿಗೆಗೆ ಸುರಕ್ಷಿತ, ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಸ್ವಚ್ಛತೆ, ಶುದ್ಧ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಕಡೆಗೆ ನಾವು ದೃಢವಾದ ಹೆಜ್ಜೆಗಳನ್ನು ಇಡಬೇಕು ಎಂದರು.

ನಮ್ಮ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾನ್ ವೀರರ ಅದಮ್ಯ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥತೆಯನ್ನು ನೆನಪಿಸುತ್ತದೆ. ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತೇವೆ, ಪರಿಸರವನ್ನು ರಕ್ಷಿಸುತ್ತೇವೆ, ಡಿಜಿಟಲ್ ಮತ್ತು ಹಸಿರು ಆರ್ಥಿಕತೆಯತ್ತ ಸಾಗುತ್ತೇವೆ ಮತ್ತು ಮುಂಬರುವ ಪೀಳಿಗೆಗೆ ಬಲವಾದ, ಸಮೃದ್ಧ, ಸುರಕ್ಷಿತ ಕರ್ನಾಟಕ ಮತ್ತು ಭಾರತವನ್ನು ನಿರ್ಮಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಥಾವರ್‌ ಚಂದ್ ಗೆಹ್ಲೋಟ್ ತಿಳಿಸಿದರು.

ಸ್ವತಂತ್ರ ಭಾರತದ 78 ವರ್ಷಗಳ ಅಭಿವೃದ್ಧಿ ಪ್ರಯಾಣವು ಅನೇಕ ಸಾಧನೆಗಳು ಮತ್ತು ಸವಾಲುಗಳಿಂದ ತುಂಬಿದೆ. ಕೃಷಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ ಮೌಲ್ಯಗಳು, ನಾಗರಿಕರ ಭಾಗವಹಿಸುವಿಕೆ ಮತ್ತು ಏಕತೆಯ ಬಲದಿಂದ ಇದೆಲ್ಲವೂ ಸಾಧ್ಯವಾಗಿದೆ. ಈ ರಾಷ್ಟ್ರೀಯ ಅಭಿವೃದ್ಧಿ ಪ್ರಯಾಣದಲ್ಲಿ ರಾಜ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ನುಡಿದರು.

ರಾಜ್ಯ ಸರಕಾರ ಬಡತನ ನಿರ್ಮೂಲನೆ ಮಾಡಲು, ಮಹಿಳೆಯರನ್ನು ಸಬಲೀಕರಣಗೊಳಿಸಲು, ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು, ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಮತ್ತು ಹಲವಾರು ಕಲ್ಯಾಣ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಈ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಆರೋಗ್ಯ, ಅಕ್ಷರ ಆವಿಷ್ಕಾರ, ಯುವ ನಿಧಿ ಯೋಜನೆ ಮುಂತಾದ ಪ್ರಮುಖ ಯೋಜನೆಗಳು ಸೇರಿವೆ, ಇದರ ಜೊತೆಗೆ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಥಾವರ್‌ ಚಂದ್ ಗೆಹ್ಲೋಟ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News