ಬೆಂಗಳೂರು | ಪಿಎಸ್ಸೈ ಮೇಲೆ ಕಾರು ಹತ್ತಿಸಲು ಯತ್ನ
Update: 2025-08-29 23:42 IST
ಬೆಂಗಳೂರು, ಆ.29: ಪಾನಮತ್ತರಾದ ನಾಲ್ಕೈದು ಮಂದಿ ಸೇರಿಕೊಂಡು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪಿಎಸ್ಸೈ) ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ರಾಜಗೋಪಾಲನಗರದಲ್ಲಿ ವರದಿಯಾಗಿದೆ.
ಘಟನೆಯಲ್ಲಿ ರಾಜಗೋಪಾಲನಗರ ಠಾಣೆಯ ಪಿಎಸ್ಸೈ ಮುರಳಿ ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ.28 ರಾತ್ರಿ ವೇಳೆಯಲ್ಲಿ ರಾಜಗೋಪಾಲನಗರದ ಮದ್ಯದಂಗಡಿ ಸಮೀಪ ಪಿಎಸ್ಸೈ ಮುರಳಿ ಗಸ್ತು ತಿರುಗುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಮಂದಿ ಮದ್ಯಪಾನ ಮಾಡುತ್ತಿದ್ದರು. ಮದ್ಯದಂಗಡಿ ಬಾಗಿಲು ಮುಚ್ಚಿದ್ದರೂ, ಕೈಯಲ್ಲಿ ಗ್ಲಾಸ್ ಹಿಡಿದು ಆರೋಪಿಗಳು ಪುಂಡಾಟ ಮೆರೆದಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ವರ್ತನೆಯನ್ನು ಪ್ರಶ್ನಿಸಲು ಮುಂದಾದ ಪಿಎಸ್ಸೈ ಮುರಳಿ ಅವರ ಮೇಲೆ ಕಾರನ್ನು ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಪಿಎಸ್ಸೈಗೆ ಗಾಯಗಳಾಗಿವೆ. ಕಾರು ಜಾನ್ಸನ್ ಎಂಬವನಿಗೆ ಸೇರಿರುವುದು ಎಂದು ತಿಳಿದುಬಂದಿದೆ. ಈ ಸಂಬಂಧ ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.