ಬಳ್ಳಾರಿಗೆ ಜೈಲಿಗೆ ದರ್ಶನ್ ಸ್ಥಳಾಂತರಕ್ಕೆ ಕೋರಿದ್ದ ಅರ್ಜಿ; ನಾಳೆಗೆ ವಿಚಾರಣೆ ಮುಂದೂಡಿದ ಸೆಷನ್ಸ್ ಕೋರ್ಟ್
Update: 2025-09-02 18:49 IST
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ.
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಬೇಕೆಂದು ಕೋರಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಲ್ಲಿಸಿರುವ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ, ದಿಂಬು, ಹೊದಿಕೆಗಳಿಗೆ ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ಮಂಗಳವಾರ ವಿಚಾರಣೆ ನಡೆಸಿದರು.
ದರ್ಶನ್ ಪರ ಹಿರಿಯ ವಕೀಲ ಸಂದೇಶ್ ಚೌಟ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ದಿನದ ಕಲಾಪದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬುಧವಾರ ಸಂಜೆ 4 ಗಂಟೆಗೆ ಮುಂದೂಡಿತು.