×
Ad

ಬೆಂಗಳೂರು | ಉದ್ಯಮಿ ಅಪಹರಿಸಿ ಹಣ ಸುಲಿಗೆ ಪ್ರಕರಣ : ರೌಡಿಶೀಟರ್‌ಗಳ ಸಹಿತ ಆರು ಮಂದಿ ಬಂಧನ

Update: 2025-09-02 19:53 IST

ಸಾಂದರ್ಭಿಕ ಚಿತ್ರ | PC : Meta AI

ಬೆಂಗಳೂರು, ಸೆ.2 : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದಡಿ ರೌಡಿಶೀಟರ್‌ಗಳ ಸಹಿತ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ ಯಾನೆ ಅಪ್ಪಿ, ಸೀನಾ ಯಾನೆ ಬಾಂಬೆ ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆ.26ರಂದು ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್‍ನಿಂದ ಉದ್ಯಮಿ ಎಚ್.ವಿ.ಮನೋಜ್ ಕುಮಾರ್(25) ಅವರನ್ನು ಬಂಧಿತರು ಅಪಹರಿಸಿ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರು ಮಂದಿ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ರಿಯಲ್ ಎಸ್ಟೇಟ್ ಉದ್ಯಮಿ ಮನೋಜ್ ಕುಮಾರ್‌ಗೆ ಆರೋಪಿ ರಾಜೇಶ್ ಯಾವುದೋ ಕಾರಣದ ನಿಮಿತ್ತ ಪರಿಚಿತನಾಗಿದ್ದ. ಬಳಿಕ ಖ್ಯಾತ ಸಿನಿಮಾ ನಿರ್ದೇಶಕರೊಬ್ಬರಿಗೆ ಈ ರಾಜೇಶ್, ಮನೋಜ್ ಕುಮಾರ್‌ರಿಂದ 1.20 ಲಕ್ಷ ರೂ. ಸಾಲ ಕೊಡಿಸಿದ್ದ. ಒಂದು ವರ್ಷವಾದರೂ ಸಾಲದ ಹಣ ವಾಪಾಸ್ ನೀಡದಿದ್ದಾಗ ರಾಜೇಶನ ಮೇಲೆ ಮನೋಜ್ ಕುಮಾರ್ ಒತ್ತಡ ಹೇರಿದ್ದರು.

ಆಗಸ್ಟ್ 26ರ ಸಂಜೆ 6.30ಕ್ಕೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್‍ಗೆ ಮನೋಜ್ ಕುಮಾರ್ ಅವರನ್ನು ರಾಜೇಶ್ ಕರೆಸಿಕೊಂಡಿದ್ದ. ಬಳಿಕ ದೊಡ್ಡವರು ಹಣ ಕೊಡುತ್ತಾರೆಂದು ಹೇಳಿ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಆದರೆ, ಮಾರ್ಗ ಮಧ್ಯೆ ಮತ್ತೊಂದು ಕಾರಿನಲ್ಲಿ ಮನೋಜ್ ಕುಮಾರ್‍ನನ್ನು ಕೂರಿಸಿಕೊಂಡು ಇತರೆ ಆರೋಪಿಗಳು ಅಪಹರಿಸಿದ್ದರು. ನಗರದ ವಿವಿಧೆಡೆ ಸುತ್ತಾಡಿಸಿ ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ ಮನೋಜ್ ಅವರ ಎರಡು ಖಾತೆಗಳಿಂದ ಒಟ್ಟು 2.96 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ನಂತರವೂ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು. ಮನೋಜ್ ಕುಮಾರ್ ಒಪ್ಪಿಕೊಂಡ ಬಳಿಕ ಮಾರನೇ ದಿನ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್ ಬಳಿ ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು.

ಬಳಿಕ ಮನೋಜ್ ಅವರು ಸಿಸಿಬಿಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News