ಮಸೀದಿಗಳನ್ನು ಸಾಮಾಜಿಕ ಸೇವೆಗೂ ಲಭ್ಯವಾಗಿಸಬೇಕು : ಶಾಸಕ ರಿಝ್ವಾನ್ ಅರ್ಶದ್
ಬೆಂಗಳೂರು, ಸೆ.21: ಮಸೀದಿಗಳನ್ನು ಕೇವಲ ಪ್ರಾರ್ಥನೆಗೆ ಸೀಮಿತಗೊಳಿಸದೆ, ಎಲ್ಲ ಜಾತಿ, ಧರ್ಮದವರಿಗೂ ನೆರವು ಒದಗಿಸುವ ಸಾಮಾಜಿಕ ಸೇವಾ ಕಾರ್ಯಗಳಿಗೂ ಲಭ್ಯವಾಗಿಸಬೇಕು ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ತಿಳಿಸಿದರು.
ರವಿವಾರ ನಗರದ ಶಿವಾಜಿನಗರದಲ್ಲಿರುವ ಚಾರ್ ಮಿನಾರ್ ಮಸೀದಿಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಮಸೀದಿಗಳಲ್ಲಿ ಬಡವರಿಗೆ ನೆರವು ಒದಗಿಸುವಂತಹ ವ್ಯವಸ್ಥೆ ರೂಪಿಸಿದರೆ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಚಾರ್ ಮಿನಾರ್ ಮಸೀದಿಯ ಮೂಲಕ ಜಾರ್ತಿ, ಧರ್ಮದ ಬೇಧವಿಲ್ಲದೆ ಪ್ರತಿ ತಿಂಗಳು ಸುಮಾರು 300 ಮಂದಿ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಮಸೀದಿಗೆ ಪ್ರಾರ್ಥನೆ ಮಾಡಲು ಬರುವವರು ಹಾಗೂ ಆಡಳಿತ ಸಮಿತಿಯವರೆ ಈ ವೆಚ್ಚವನ್ನು ಭರಿಸುತ್ತಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಶಿವಾಜಿನಗರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಗೊಳ್ಳಲಿದೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.
ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಮಾತನಾಡಿ, ನಾನು ಹೈದರಾಬಾದ್‍ನಲ್ಲಿರುವ ಚಾರ್ ಮಿನಾರ್ ನೋಡಿದ್ದೇನೆ. ಆದರೆ, ನಮ್ಮ ಶಿವಾಜಿನಗರದ ಚಾರ್ ಮಿನಾರ್ ಮಸೀದಿ ಅದಕ್ಕಿಂತ ಉತ್ತಮ ಹಾಗೂ ವಿಶೇಷವಾಗಿದೆ. ಇಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದು ತಿಳಿಸಿದರು.
ಧರ್ಮವು ಜನರನ್ನು ಒಂದು ಗೂಡಿಸಬೇಕು, ವಿಭಜನೆ ಮಾಡಬಾರದು. ಪ್ರತಿಯೊಬ್ಬರಲ್ಲಿ ಇರುವ ಉತ್ತಮ ಗುಣಗಳನ್ನು ಪಡೆದುಕೊಳ್ಳೋಣ, ಕೆಟ್ಟದ್ದನ್ನು ತಿರಸ್ಕರಿಸೋಣ. ಶಿವಾಜಿನಗರದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಎಲ್ಲರೂ ಅನ್ನೋನ್ಯವಾಗಿ ಬಾಳುತ್ತಿರುವುದು ಮೆಚ್ಚುಗೆ ವ್ಯಕ್ತಪಡಿಸುವಂತಹದ್ದು ಎಂದು ಪೀಟರ್ ಮಚಾದೋ ಹೇಳಿದರು.
ಚಾರ್ ಮಿನಾರ್ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಶೇಖ್ ಏಜಾಝ್ ಅಹ್ಮದ್ ನದ್ವಿ ಮಾತನಾಡಿ, 11 ವರ್ಷಗಳಿಂದ ನಿರಂತರವಾಗಿ ನಮ್ಮ ಮಸೀದಿಯ ಮೂಲಕ ಡಯಾಲಿಸಿಸ್ ರೋಗಿಗಳಿಗೆ ನೆರವು ನೀಡುತ್ತಾ ಬರುತ್ತಿದ್ದೇವೆ. ಪ್ರತಿ ತಿಂಗಳು ಒಂದು ಶುಕ್ರವಾರ ಮಸೀದಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಈ ಸಾಮಾಜಿಕ ಕಾರ್ಯಕ್ಕೆ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಕೊರೋನ ಸಂದರ್ಭದಲ್ಲಿಯೂ ಈ ಕಾರ್ಯಕ್ರಮವನ್ನು ನಿಲ್ಲಿಸಿಲ್ಲ. ಪ್ರತಿ ತಿಂಗಳು ಕಾರ್ಯಕ್ರಮ ಆಯೋಜಿಸಿ ಬಡವರಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ಇದರ ಜೊತೆಗೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಶಿಬಿರ, ಬಡ ಮಕ್ಕಳ ಶಿಕ್ಷಣ, ವಿವಾಹಕ್ಕೂ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯ ಮಹೇಂದ್ರ ಜೈನ್, ಡಾ.ಶ್ರೀರಂಗ, ಮುಖಂಡರಾದ ಏಜಾಝ್ ಖುರೇಷಿ, ರಿಝ್ವಾನುಲ್ಲಾ ಖುರೇಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.