ನ್ಯಾಯಾಂಗ ಅಧಿಕಾರಿ ದಂಪತಿಯ ಸೇವಾ ಸೌಲಭ್ಯ ಕಡಿತ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ರಾಜ್ಯದ ವಿವಿಧ ಅಧೀನ ನ್ಯಾಯಾಲಯಗಳಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ, ಹಿರಿಯ ಶ್ರೇಣಿ ಹಾಗೂ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಪತಿ-ಪತ್ನಿ (ದಂಪತಿ) ನ್ಯಾಯಾಂಗ ಅಧಿಕಾರಿಗಳಿಗೆ ನೀಡಲಾಗುವ ಸೇವಾ ಸೌಲಭ್ಯಗಳಲ್ಲಿ ಕೆಲವು ಕಡಿತಗೊಳಿಸಿರುವ ಪರಿಷ್ಕೃತ ಪ್ರಮಾಣೀಕೃತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ 65ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ (ಸಿಸಿಎಚ್-56) ನ್ಯಾಯಾಧೀಶರಾದ ಮೋಹನ್ ಪ್ರಭು ಹಾಗೂ ರಾಜ್ಯದ ವಿವಿಧ ಅಧೀನ ನ್ಯಾಯಾಲಯಗಳ ಜಿಲ್ಲಾ ನ್ಯಾಯಾಧೀಶರು, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಸಿವಿಲ್ ನ್ಯಾಾಯಾಧೀಶರು ಸೇರಿ 54 ಮಂದಿ ದಂಪತಿ ನ್ಯಾಯಾಂಗ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿವಿಚಾರಣೆ ಮುಂದೂಡಿತು.
ಪ್ರಕರಣವೇನು?
ಅರ್ಜಿದಾರರು 2003ರಿಂದ ನ್ಯಾಯಾಂಗ ಸೇವೆಗೆ ಸೇರಿದವರಿದ್ದಾರೆ. 2ನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗ 2020ರಲ್ಲಿ ಮಾಡಿರುವ ಶಿಫಾರಸಿನಂತೆ ಅರ್ಜಿದಾರ ನ್ಯಾಯಾಂಗ ಅಧಿಕಾರಿ ದಂಪತಿಗಳಿಬ್ಬರು ಪತಿ ಅಥವಾ ಪತ್ನಿ ಎಂಬ ನಿರ್ಬಂಧವಿಲ್ಲದೆ ಇಬ್ಬರೂ ಸಮಾನವಾಗಿ ವೇತನ, ಭತ್ಯೆ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಆಯೋಗದ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಸಹ 2024ರಲ್ಲಿ ಅನುಮೋದಿಸಿದೆ. ಅಲ್ಲದೇ ಆಯೋಗದ ಶಿಫಾರಸುಗಳನ್ನು ಅನುಷ್ಠಾಗೊಳಿಸಲು ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತ್ತು.
2ನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗ ಶಿಫಾರಸುಗಳನ್ನು ಜಾರಿಗೆ ತರುವ ಸಂಬಂಧ ಹೈಕೋರ್ಟ್ 'ಜಿಲ್ಲಾ ನ್ಯಾಯಾಂಗದ ಸೇವಾ ಷರತ್ತುಗಳ ಸಮಿತಿ' ರಚಿಸಿತ್ತು. ಸಮಿತಿಯು ದಂಪತಿ ನ್ಯಾಯಾಂಗ ಅಧಿಕಾರಿಗಳ ಭತ್ಯೆಗಳು ಹಾಗೂ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಎಸ್‌ಒಪಿ ರೂಪಿಸಿತ್ತು. ಅದನ್ನು ಹೈಕೋರ್ಟ್ 2024ರ ಜೂನ್ 19ರಿಂದ ಜಾರಿಗೆ ತಂದಿದೆ. ಅದರಂತೆ, ಪತಿ-ಪತ್ನಿ ಇಬ್ಬರೂ ನ್ಯಾಯಾಂಗ ಅಧಿಕಾರಿಗಳಿದ್ದಾಗ ಸಾರಿಗೆ ಭತ್ಯೆ, ಇಂಧನ ಭತ್ಯೆ, ಗೃಹ ಭತ್ಯೆ ಹಾಗೂ ವರ್ಗಾವಣೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಕೊಡಲಾಗುತ್ತದೆ. ಇದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.