ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಆರ್.ಸುನಂದಮ್ಮ ಆಯ್ಕೆ
ಬೆಂಗಳೂರು, ಡಿ.14: ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್ ಸುನಂದಮ್ಮ ಆಯ್ಕೆಯಾಗಿದ್ದಾರೆ. ರವಿವಾರ ನಡೆದ ಚುನಾವಣೆಯಲ್ಲಿ ಸ್ತ್ರೀವಾದಿ ಲೇಖಕಿ ಆರ್ ಸುನಂದಮ್ಮ ಮತ್ತು ಲೇಖಕಿ, ಪ್ರಾಧ್ಯಾಪಕಿ ನಿರ್ಮಲಾ ಎಲಿಗಾರ್ ಕಣದಲ್ಲಿದ್ದರು. ಡಾ. ಆರ್ ಸುನಂದಮ್ಮ ಅವರು 471 ಮತಗಳನ್ನು ಪಡೆದರೆ, ನಿರ್ಮಲಾ ಎಲಿಗಾರ್ ಅವರು 282 ಮತಗಳು ಲಭಿಸಿದವು. 4 ಮತಗಳು ಅಸಿಂಧುವಾದವು. ಒಟ್ಟು 757 ಮತಗಳು ಚಲಾವಣೆಗೊಂಡಿದ್ದವು.
ಬೆಂಗಳೂರು ನಗರದ ಮತದಾರರು ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಬೆಳಿಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಉಳಿದ ಜಿಲ್ಲೆಯವರು ಅಂಚೆ ಮತದಾನ ಮಾಡಿದ್ದರು.
ನಿಯಮದ ಪ್ರಕಾರವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯು ನಡೆಯುತ್ತದೆ. ಬೆಂಗಳೂರು ನಗರದಲ್ಲಿ ವಾಸವಿರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದವರು ಅವರೇ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಂಘದ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.