ಕಲ್ಯಾಣ ಕರ್ನಾಟಕದ 41 ಶಾಲೆಗಳಲ್ಲಿ ‘ನೆಹರು ಸ್ಟ್ರೀಮ್ ಲ್ಯಾಬ್’ ಸ್ಥಾಪನೆ
'ಕ್ವಾಂಟಮ್ ಫಿಸಿಕ್ಸ್' ಮತ್ತು 'ಪರಿಸರ ವಿಜ್ಞಾನ' ಕಲಿಕೆಗೆ ವಿಶೇಷ ಆದ್ಯತೆ : ಸಚಿವ ಭೋಸರಾಜು
ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ‘ನೆಹರು ಸ್ಟ್ರೀಮ್ ಲ್ಯಾಬ್’ ಗಳನ್ನು ಸ್ಥಾಪಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.
ರವಿವಾರ ಪ್ರಕಟಣೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಜಾರಿಗೊಳ್ಳುತ್ತಿರುವ ಈ ಯೋಜನೆಯು, ಸಾಂಪ್ರದಾಯಿಕ ವಿಜ್ಞಾನ ಕಲಿಕೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಭವಿಷ್ಯದ ಅತ್ಯಾಧುನಿಕ ವಿಜ್ಞಾನ ಮತ್ತು ಪರಿಸರ ಸುಸ್ಥಿರತೆಯನ್ನು ಒಳಗೊಂಡ ವಿಶಿಷ್ಟ ಪಠ್ಯಕ್ರಮವನ್ನು ಆ ಭಾಗದ ವಿದ್ಯಾರ್ಥಿಗಳಿಗೆ ಪರಿಚಯಿಸಲಿದೆ. 'ಸ್ಟ್ರೀಮ್' ಪದದ ವ್ಯಾಖ್ಯಾನವನ್ನು ಜಾಗತಿಕ ವೈಜ್ಞಾನಿಕ ಪ್ರಗತಿ ಮತ್ತು ಸ್ಥಳೀಯ ಪರಿಸರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
STREAM ಎಂದರೆ ವಿಜ್ಞಾನ (Science), ತಂತ್ರಜ್ಞಾನ (Technology), ರೊಬೊಟಿಕ್ಸ್ (Robotics), ಪರಿಸರ ವಿಜ್ಞಾನ (Ecology), ಖಗೋಳಶಾಸ್ತ್ರ (Astronomy) ಮತ್ತು ಗಣಿತ (Mathematics) ಆಗಿರುತ್ತದೆ," ಎಂದು ಸಚಿವರು ವಿವರಿಸಿದರು.
"ಇದೇ ಮೊದಲ ಬಾರಿಗೆ ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ 'ಕ್ವಾಂಟಮ್ ಫಿಸಿಕ್ಸ್'ನ ಮೂಲಭೂತ ಪರಿಕಲ್ಪನೆಗಳನ್ನು ಪರಿಚಯಿಸಲಾಗುತ್ತಿದೆ. ಇದು ಬ್ರಹ್ಮಾಂಡದ ಮೂಲ ಸ್ವರೂಪದ ಬಗ್ಗೆ ಮಕ್ಕಳಲ್ಲಿ ಕುತೂಹಲವನ್ನು ಮೂಡಿಸಲಿದೆ. ಅದೇ ಸಮಯದಲ್ಲಿ, ನಾವು ಪರಿಸರ ವಿಜ್ಞಾನಕ್ಕೆ ಒತ್ತು ನೀಡುತ್ತಿದ್ದೇವೆ. ಇದು ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗುತ್ತಿರುವ ವಿನೂತನ ಉಪಕ್ರಮವಾಗಿದ್ದು, ಇದರಲ್ಲಿ ಮಕ್ಕಳು ತರಗತಿ ಕೊಠಡಿಯಿಂದ ಹೊರಬಂದು, ತಮ್ಮ ಸುತ್ತಮುತ್ತಲಿನ ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲದ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ. ಎಳೆಯ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ಸುಸ್ಥಿರತೆ ಮತ್ತು ಪರಿಸರ ಕಾಳಜಿಯನ್ನು ಬಿತ್ತುವುದು ನಮ್ಮ ಗುರಿಯಾಗಿದೆ," ಎಂದು ಹೇಳಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್, "ನಾವು ಮಕ್ಕಳನ್ನು ಎಳೆಯ ವಯಸ್ಸಿನಲ್ಲೇ ಭವಿಷ್ಯಕ್ಕೆ ಸಿದ್ಧಗೊಳಿಸಬೇಕು. ಮೊದಲ ಹಂತದಲ್ಲಿ, ಈ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 41 ಶಾಲೆಗಳಲ್ಲಿ ಈ ಲ್ಯಾಬ್‌ಗಳನ್ನು ಪ್ರಾರಂಭಿಸುತ್ತಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ನಗರದ ವಿದ್ಯಾರ್ಥಿಗಳಿಗೆ ಸಮಾನವಾದ ವೈಜ್ಞಾನಿಕ ಮನೋಭಾವ ಮತ್ತು ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯ," ಎಂದು ತಿಳಿಸಿದ್ದಾರೆ.
ಈಗಾಗಲೆ ಕೆಕೆಆರ್‌ಡಿಬಿ ಕಾರ್ಯದರ್ಶಿಗಳು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಪತ್ರದ ಮೂಲಕ (ದಿನಾಂಕ: 10.12.2025) 41 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಪಟ್ಟಿಯನ್ನು ಅಂತಿಮಗೊಳಿಸುವಂತೆ ಸೂಚಿಸಿದ್ದಾರೆ.