ಪರಿಶಿಷ್ಟ ಜಾತಿಗಳಲ್ಲಿ ಇರುವವರನ್ನು ಕ್ರೈಸ್ತರನ್ನಾಗಿಸುವ ಉದ್ದೇಶವಿದೆಯೇ?: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು, ಸೆ.22: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳಲ್ಲಿ ಇರುವ ಎಲ್ಲಕ್ಕೂ ಕ್ರಿಶ್ಚಿಯನ್ ಪದ ಸೇರಿಸಿದ್ದಾರೆ. ಇವರೆನ್ನೆಲ್ಲ ಕ್ರಿಶ್ಚಿಯನ್ ಮಾಡುವ ಉದ್ದೇಶ ಇದರ ಹಿಂದಿದೆಯೇ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.
ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಈ ಸಮೀಕ್ಷೆ ಬೂಟಾಟಿಕೆ ಮತ್ತು ಪುಂಡಾಟಿಕೆಯದು ಎಂದು ಆಕ್ಷೇಪಿಸಿದರು.
ಒಂದು ನಿಗದಿತ ಧರ್ಮವನ್ನು ಬೆಳೆಸುವ ಉದ್ದೇಶ ಸರಕಾರಕ್ಕೆ ಇದೆಯೇ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರೇಪಣೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರು ಪ್ರಶ್ನಿಸಿದರು.
ಯಾವ ಜಾತಿಯಿಂದ ಬಂದವರು, ಯಾವ ಧರ್ಮದಿಂದ ಬಂದವರೆಂದು ನೀವು ಸಮೀಕ್ಷೆಯಲ್ಲಿ ತಿಳಿಸಬೇಕಿಲ್ಲ, ಇದು ಸರಕಾರಿ ದಾಖಲೆಗೆ ಬೇಕಾಗಿಲ್ಲ. ಇದೆಲ್ಲ ಬಿಟ್ಟು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೀಗೆ ಮಾಡುವುದು ಕಾನೂನುಬಾಹಿರ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಬಾರದೆಂಬ ಉದ್ದೇಶ ಸರಕಾರಕ್ಕೆ ಬಂದರೆ, ಇನ್ನು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಹೇಗಿರುತ್ತದೆ ಎಂಬುದು ಜನರಿಗೆ ಬಿಟ್ಟ ವಿಚಾರ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ?: ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ? ಅಥವಾ ಸೋನಿಯಾ ಗಾಂಧಿ ಈ ರೀತಿ ಮಾಡಲು ಹೇಳಿದ್ದಾರಾ? ಜನಸಾಮಾನ್ಯರು ಅರ್ಜಿ ನೀಡಿ ಅಥವಾ ಬೀದಿಗಿಳಿದು ಕ್ರಿಶ್ಚಿಯನ್ ಅಂತ ಸೇರಿಸಲು ಒತ್ತಾಯಿಸಿದ್ದಾರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಒಬ್ಬರು ಹೊರತುಪಡಿಸಿದರೆ ಇಡೀ ಕಾಂಗ್ರೆಸ್ ಸಚಿವ ಸಂಪುಟ ಈ ಸಮೀಕ್ಷೆಯ ವಿರುದ್ಧವಿದೆ. ಬಿಜೆಪಿ, ಜೆಡಿಎಸ್, ಮಠಮಾನ್ಯಗಳ ಗುರುಹಿರಿಯರು, ಸಮುದಾಯಗಳ ಮುಖಂಡರು ನಿಮ್ಮ ವಿರುದ್ಧ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಈ ಸಮೀಕ್ಷೆ ಹೊಸದೇನೂ ಅಲ್ಲ, ಕಾಂತರಾಜು ಆಯೋಗ ರಚಿಸಿ ಸಮೀಕ್ಷೆ ಮಾಡಲಾಗಿತ್ತು. ಸರಕಾರ ಅದನ್ನು ಒಪ್ಪಲಿಲ್ಲ. ಆ ವರದಿ ಎಲ್ಲಿ ಹೋಯಿತೆಂದು ಗೊತ್ತಿಲ್ಲ. ಅದು ಕಳವಾಗಿದೆಯಂತೆ, ಅದೇನು ಚಿನ್ನವೇ? ಕಳುವಾಗಿರುವ ಆಯೋಗದ ವರದಿಯನ್ನು ಪತ್ತೆ ಮಾಡಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಜನರ ಹಣ ಇಷ್ಟ ಬಂದಂತೆ ಪೋಲು: ಕಾಂತರಾಜು ಆಯೋಗಕ್ಕೆ ಸುಮಾರು 180 ಕೋಟಿ ರೂ. ಖರ್ಚು ಮಾಡಿದ್ದರು. ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿಗೆ ಎಷ್ಟು ಖರ್ಚಾಗಿದೆ ಎಂದು ಬಾಯಿ ಬಿಡುತ್ತಿಲ್ಲ. ಈಗ ಮತ್ತೆ 425 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಇದೇನು ಕಾಂಗ್ರೆಸ್ಸಿನ ಖಜಾನೆಯೇ?, ನಿಮ್ಮ ಮನೆಯಿಂದ ತಂದು ಕೊಡುತ್ತೀರಾ? ಜನರ ಹಣವನ್ನು ಇಷ್ಟ ಬಂದಂತೆ ಪೋಲು ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟವರು ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಬಿಜೆಪಿ ರಾಜ್ಯ ವಕ್ತಾರ ಎಚ್.ವೆಂಕಟೇಶ್ ದೊಡ್ಡೇರಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಮತ್ತು ಎಸ್.ಸಿ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.