ಬೆಂಗಳೂರು | ಪತ್ನಿಗೆ ಚಾಕು ಇರಿದು ಕೊಲೆಗೈದು ಪತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.29: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಗೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಉಲ್ಲಾಳ ಮುಖ್ಯರಸ್ತೆಯ ಪ್ರೆಸ್‍ಲೇಔಟ್‍ನಲ್ಲಿ ವಾಸವಾಗಿದ್ದ ಮಂಜುಳ(27) ಕೊಲೆಯಾದ ಮಹಿಳೆ. ಧರ್ಮಶೀಲನ್(29) ಎಂಬಾತ ಪತ್ನಿಯನ್ನು ಕೊಲೆ ಮಾಡಿದ ನಂತರ ತಾನು ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಮಧ್ಯೆ ಸೆ.28ರ ತಡರಾತ್ರಿ ಜಗಳವಾಗಿ ಈ ಕೃತ್ಯ ನಡೆದಿದೆ. ತಮಿಳುನಾಡು ಮೂಲದ ಧರ್ಮಶೀಲನ್ ವೃತ್ತಿಯಲ್ಲಿ ಪೆಂಟರ್ ಕೆಲಸ ಮಾಡುತ್ತಿದ್ದು, ಮಂಜುಳ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೆ.28ರ ತಡರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಗೆ 15ಕ್ಕೂ ಹೆಚ್ಚು ಬಾರಿ ಇರಿದು, ಕೊಲೆ ಮಾಡಿದ್ದಾನೆ. ನಂತರ ಆತನೂ ಸಹ ಅದೇ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.